PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಮಾ.18: ಬೋಳುವಾರು ಮಹಮ್ಮದ್ ಕುಂಞಿಯವರ ‘ಸ್ವಾತಂತ್ರದ ಓಟ’ ಮಹಾಕಾದಂಬರಿಯು ಕವಲು, ಆವರಣದಂತಹ ಕಾದಂಬರಿಗಳಿಗೆ ಪರ್ಯಾಯ ಕೃತಿಯಾಗಿ ಜನಪ್ರಿಯಗೊಳ್ಳುವ ಎಲ್ಲ ಲಕ್ಷಣಗಳನ್ನು ಹೊಂದಿದೆ ಎಂದು ಹಿರಿಯ ವಿಮರ್ಶಕ ಎಚ್.ಎಸ್.ರಾಘವೇಂದ್ರರಾವ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರವಿವಾರ ಬೋಳುವಾರು ಮಹಮ್ಮದ್ ಕುಂಞುಯವರ ‘ಸ್ವಾತಂತ್ರದ ಓಟ’ ಮಹಾ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕವಲು, ಆವರಣದಂತಹ ಕಾದಂಬರಿಗಳೆ ಜನಪ್ರಿಯಗೊಳ್ಳುತ್ತಿವೆ ಮತ್ತು ಅತಿ ಹೆಚ್ಚು ಮಾರಾಟವಾಗುತ್ತವೆ ಎಂದು ಹೇಳಲಾಗುತ್ತಿದೆ. ಬೋಳುವಾರರ ಈ ಕಾದಂಬರಿಯು ಕವಲು-ಆವರಣಗಳಿಗಿಂತ ವೈಚಾರಿಕವಾಗಿ ವಿಭಿನ್ನ ನೆಲೆಯಲ್ಲಿ ಮೂಡಿಬಂದಿದೆ. ಜನಪ್ರಿಯ ಮಾದರಿಯಲ್ಲಿ ಎಲ್ಲ ವರ್ಗದ ಓದುಗರಿಗೂ ಇಷ್ಟವಾಗುವ ನಿರೂಪಣಾ ಶೈಲಿಯಿಂದ ಕೂಡಿದೆ. ಹೀಗಾಗಿ ಭೈರಪ್ಪನವರ ಕಾದಂಬರಿಗಳಿಗೆ ಪರ್ಯಾಯ ಕೃತಿಯಾಗುವ ಎಲ್ಲ ಲಕ್ಷಣಗಳಿಂದ ಕೂಡಿದೆ ಎಂದರು.

ಕುವೆಂಪು ಅವರು ಬರೆಯಬೇಕೆಂದಿದ್ದ ‘ಕಾಲೋಸ್ಮಿ’ ಕಾದಂಬರಿಯ ಮತ್ತೊಂದು ರೂಪವಾಗಿ ಈ ಕಾದಂಬರಿ ಹೊರ ಹೊಮ್ಮಿದೆ ಎನ್ನಬಹುದು. ಕುವೆಂಪು ಅವರು ತಮ್ಮ ಕೊನೆಯ ದಿನಗಳಲ್ಲಿ ‘ಕಾಲೋಸಿ’್ಮ ಹೆಸರಿನಲ್ಲಿ ಕಾದಂಬರಿ ಬರೆಯಬೇಕೆಂದಿದ್ದರು. ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಹೆಗ್ಗಡತಿ ಕಾದಂಬರಿಗಳ ಕಾಲ ನೂರಾರು ವರ್ಷಗಳ ಹಿಂದಿನದಾಗಿದ್ದುದರಿಂದ ಸ್ವಾತಂತ್ರ ಹೋರಾಟದಿಂದ ಹಿಡಿದು ತಮ್ಮ ಸಮಕಾಲಿನ ತಲ್ಲಣಗಳನ್ನು ಈ ಕಾದಂಬರಿಯಲ್ಲಿ ಹಿಡಿದಿಡಬೇಕೆಂದಿದ್ದರು. ಬೋಳುವಾರರು ಕುವೆಂಪು ಅವರ ಆಶಯದಂತೆ ಸ್ವಾತಂತ್ರ ನಂತರದ 60 ವರ್ಷಗಳ ಕಾಲಾವಧಿಯ ಮಹಾ ಕಾದಂಬರಿಯನ್ನು ರಚಿಸಿದ್ದಾರೆ ಎಂದರು.

ಇದನ್ನು ಕೇವಲ ದೇಶ ವಿಭಜನೆಯ ಕಾದಂಬರಿ ಎಂದು ಕರೆಯುವುದು ಸರಿಯಲ್ಲ. ಲಾಹೋರ್, ವಾಘಾ ಗಡಿ, ದೆಹಲಿ ಸ್ಥಳಗಳ ಮೂಲಕ ಕಥೆ ಬೆಳೆಯುತ್ತಾ ಬಂದು ಭಾರತದ ದಕ್ಷಿಣ ಭಾಗದಲ್ಲಿರುವ ಚಿಕ್ಕ ಹಳ್ಳಿ ಮುತ್ತುಪ್ಪಾಡಿಯಲ್ಲಿ ಬೇರೂರುವ ಕಥೆ, ಮುತ್ತುಪ್ಪಾಡಿಯ ಆತ್ಮಕಥೆಯಾಗಿ ಬೆಳೆಯುತ್ತದೆ ಎಂದು ಅವರು ಹೇಳಿದರು.

ಮುಸ್ಲಿಂ ಸಮುದಾಯದೊಳಗಿನ ತಲ್ಲಣಗಳನ್ನು ವಿವರಿಸುವ ಜೊತೆಗೆ ಈ ಬಹುಸಂಖ್ಯಾತ ಹಿಂದೂ ಸಮುದಾಯದ ಜೊತೆಗೆ ಕೂಡುವಿಕೆ ತಲ್ಲಣಗಳನ್ನು ಸಹ ಈ ಕಾದಂಬರಿ ವಿವರಿಸುತ್ತದೆ. ಮುತ್ತುಪ್ಪಾಡಿಯ ಹೆಣ್ಣುಮಕ್ಕಳ ಮನಸ್ಸುಗಳ ವಿಶಾಲತೆಯನ್ನು, ಅವರ ಧಾರಣ ಶಕ್ತಿಯನ್ನು ಈ ಕೃತಿ ವಿವರಿಸುತ್ತದೆ. ಕನ್ನಡದ ಎಲ್ಲ ಸಾಹಿತ್ಯಾಸಕ್ತ ಮನಸ್ಸುಗಳಿಗೆ ತಲುಪಿಸುವಲ್ಲಿ ಈ ಕೃತಿಯ ಯಶಸು ಅಡಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಮರ್ಶಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಈ 1100 ಪುಟಗಳ ಕಾದಂಬರಿಯುದ್ದಕ್ಕೂ ಮನುಷ್ಯತ್ವದ ಅನ್ವೇಷಣೆಯನ್ನು ನಡೆಸುವ ಮೂಲಕ ಬೋಳುವಾರರು ತಮ್ಮದು ಮತನಿಷ್ಠ ಮನಸ್ಸಲ್ಲ. ಮಾನವೀಯತೆ ನೆಲೆಯ ಧರ್ಮನಿಷ್ಠ ಮನಸ್ಸು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.

ರೊಟ್ಟಿ ಪಾತುಮ್ಮಳಂತ ಜನ ಸಾಮಾನ್ಯರು ನಡೆಸುವ ಬದುಕಿನ ಮೂಲಕ ಧರ್ಮದ ನಡೆ ಅಥವಾ ಧರ್ಮದ ಆಚರಣೆಗಳನ್ನು ಬೋಳುವಾರು ಇಲ್ಲಿ ಪ್ರಕಟಪಡಿಸಿದ್ದಾರೆ. ಇಲ್ಲಿ ಬರುವ ನೂರಾರು ಪಾತ್ರಗಳ್ಯಾವವು ಕಪ್ಪು-ಬೀಳುಪು ಎಂದು ವಿಂಗಡಿಸಲು ಸಾಧ್ಯವಿಲ್ಲ ಎಂದು ಅವರು ಎಸ್‌ಜಿಎಸ್ ಹೇಳಿದರು.

ಕಾದಂಬರಿಯುದ್ದಕ್ಕೂ ಬರುವ ಚಾಂದಜ್ಜ ಎಂಬವನು ಬದುಕಿನ ಅನಿವಾರ್ಯತೆಗೆ ಸಿಕ್ಕು ಭಾರತದಲ್ಲಿ ನೆಲೆಸಿದ್ದು, ತಮ್ಮ ಮಾತೃದೇಶಕ್ಕೆ ಹೋಗಲು ಯಾವಾಗಲೂ ಚಡಪಡಿಸುತ್ತಿರುತ್ತಾನೆ. ಅವನ ಚಡಪಡಿಕೆ ಭಾರತದಲ್ಲಿ ನೆಲೆಸಿರುವ, ನಿರಂತರ ಅವಮಾನ ಮತ್ತು ಅನುಮಾನಗಳಿಗೆ ಈಡಾಗುತ್ತಿರುವ ಮುಸ್ಲಿಂ ಕುಟುಂಬಗಳ ಚಡಪಡಿಕೆಯೂ ಆಗಿದೆ ಅವರು ಹೇಳಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಂಗೀತ ವಿದ್ವಾಂಸ ರಾಜೀವ ತಾರಾನಾಥ್, ಈ ಕೃತಿಯಲ್ಲಿ ಬರುವ ನೂರಾರು ಪಾತ್ರದಾರಿಗಳಲ್ಲಿ ನಾನು ಒಬ್ಬ ಪಾತ್ರದಾರಿ ಎಂದು ಹೇಳಿಕೊಳ್ಳಲು ಸಂತೋಷವೆನಿಸುತ್ತದೆ. ಬೋಳುವಾರರು ಈ ಕೃತಿ ನಿರೂಪಣೆಯಲ್ಲಿ ಆತ್ಮಕಥಾ ಮಾಧರಿ ಅನುಸರಿಸಿದ್ದಾರೆ, ಆದರೂ ಇದು ಆತ್ಮಕಥೆಯಲ್ಲದ ಆತ್ಮಕಥೆ ಎಂದರು.

ಸಾಹಿತಿ ಮುಹಮ್ಮದ್ ಬಡ್ಡೂರು ಮಾತನಾಡಿ, ದೇವರನ್ನು ಎಂದೂ ನಂಬದ ನಿರೀಶ್ವರವಾದಿ ಬೋಳುವಾರರು ಇಂಥ ಕೃತಿಗಳನ್ನು ರಚಿಸುವ ಮೂಲಕ ಈಶ್ವರವಾದಿ ಮುಸ್ಲಿಮರಿಗಿಂತಲೂ ದೇವರಿಗೆ ಹತ್ತಿರದವರಾಗುತ್ತಿದ್ದಾರೆ. ಸೂಕ್ಷ್ಮ ಮನಸ್ಸಿನ ಬೋಳುವಾರರು ತಮ್ಮ ಬರವಣಿಗೆಯ ಮೂಲಕ ಕೆಲವರಿಂದ ‘ಕಾಫರ’ನೆಂದು ಕರೆಸಿಕೊಳ್ಳುವ ಪ್ರಸಂಗ ತಂದುಕೊಂಡಿದ್ದಾರೆ ಎಂದರು.

ಬೋಳುವಾರರ ಬರವಣಿಗೆಯಿಂದಾಗಿ ಇಸ್ಲಾಂ ಅನುಯಾಯಿಗಳು ಅವರನ್ನು ಮುಸ್ಲಿಮನೆಂದು ಒಪ್ಪುವುದಿಲ್ಲ. ಇನ್ನು ಹಿಂದೂಗಳು ಬೋಳುವಾರರು ಮುಸ್ಲಿಮರಂತೆ ಕಾಣುವುದಿಲ್ಲ ಎಂದು ನೇರವಾಗಿಯೆ ಹೇಳುತ್ತಾರೆ. ಒಬ್ಬ ವ್ಯಕ್ತಿಯನ್ನು ಅವನು ಹುಟ್ಟಿದ ಧರ್ಮದ ಮೂಲಕ ನೋಡುವುದಕ್ಕಿಂತಲೂ ಅವನ ಕೃತಿಯ ಮೂಲಕ ಮಾನವೀಯತೆಯಿಂದ ನೋಡುವುದು ಒಳಿತು ಎಂದು ಅವರು ಹೇಳಿದರು.

ಲೇಖಕ ಬೋಳುವಾರು ಮಹಮ್ಮದ್ ಕುಂಞು ಮತ್ತು ಸಮುದಾಯ ಸಂಘಟನೆಯ ಗುಂಡಣ್ಣ ಉಪಸ್ಥಿತರಿದ್ದರು.

ಮಹಾಭಾರತದ ಪ್ರಕ್ಷೇಪ: ಲಕ್ಷ್ಮೀಶ್ ತೋಳ್ಪಾಡಿ
ವಿದ್ವಾಂಶ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, ‘ಸ್ವಾತಂತ್ರದ ಓಟ’ ಕೃತಿಯಲ್ಲಿ ಅಲ್ಲಲ್ಲಿ ಮೂಡಿಬಂದಿರುವ ಚಿಕ್ಕ ಘಟನೆಗಳು, ಉಪ ಕಥೆಗಳು ಮಹಾಭಾರತದ ಮಹಾಕಾವ್ಯದ ಪ್ರಕ್ಷೇಪಗಳನ್ನು ನೆನಪಿಸುತ್ತವೆ. ಮಹಾಭಾರತದ ಪ್ರಕ್ಷೇಪಗಳಿಗೆ ಭೂಷಣದಂತೆ ಮೂಡಿಬಂದಿವೆ ಎಂದರು.

ಈ ಕೃತಿಯು ಸ್ವಾತಂತ್ರೋತ್ತರ ಭಾರತದ 60 ವರ್ಷಗಳ ಇತಿಹಾಸವನ್ನು ಆತ್ಮಕತೆಯ ತಳುಕಿನಲ್ಲಿ ವಿವರಿಸುತ್ತಾ ಹೋಗುತ್ತದೆ. ಒಂದು ರೀತಿಯಲ್ಲಿ ನಮ್ಮ ದೇಶದ ಸ್ವಾತಂತ್ರ ನಂತರದ ಸಾಂಸ್ಕೃತಿಕ ಬೆಳವಣಿಗೆಗಳ ಡಾಕ್ಯುಮೆಂಟರಿಯಂತೆ ಮೂಡಿ ಬಂದಿದ್ದು, ಇದನ್ನು ‘ಹೊಸಭಾರತ’ ಮಹಾಕಾವ್ಯ ಎಂದು ಕರೆಯಬಹುದು ಎಂದು ಶ್ಲಾಘಿಸಿದರು.

ಮಹಾಭಾರತದ ಪ್ರಕ್ಷೇಪಗಳು ಕಸ: ಪ್ರೊ.ಎಸ್‌ಜಿಎಸ್
ಲಕ್ಷ್ಮೀಶ ತೋಳ್ಪಾಡಿಯವರಿಗೆ ಪ್ರತಿಕ್ರಿಯಾತ್ಮಕವಾಗಿ ತಮ್ಮ ಭಾಷಣದಲ್ಲಿ ಮಾತನಾಡಿದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರಕ್ಷೇಪಗಳೆಂದರೆ ಮೂಲಕೃತಿಯಲ್ಲಿ ಇಲ್ಲದ್ದನ್ನು ನಂತರದಲ್ಲಿ ಸೇರಿಸಿದ್ದು ಎಂದರ್ಥ. ಮಹಾಭಾರತದ ಪ್ರಕ್ಷೇಪಗಳು ಸಮಾಜದಲ್ಲಿ ಅಸಮಾನತೆಯನ್ನು, ವೌಢ್ಯತೆಯನ್ನು ಬಿತ್ತುವ ಕೆಲಸ ಮಾಡಿದ್ದು, ಅವುಗಳನ್ನು ‘ಕಸ’ ಎನ್ನಬಹುದು. ಸ್ವಾತಂತ್ರದ ಓಟದಲ್ಲಿ ಬರುವ ಘಟನೆಗಳನ್ನು ಮಹಾಭಾರತದ ಪ್ರಕ್ಷೇಪಗಳಿಗೆ ಹೋಲಿಸುವುದು ಸರಿಯಲ್ಲ ಎಂದರು.

ದೇಶದಲ್ಲಿ ವರ್ಣನೀತಿ, ಕರ್ಮಸಿದ್ಧಾಂತದ ವೌಡ್ಯಗಳನ್ನು ಬಿತ್ತುವಲ್ಲಿ ಮಹಾಭಾರತದ ಪ್ರಕ್ಷೇಪಗಳು ದೊಡ್ಡ ಪಾತ್ರ ವಹಿಸಿವೆ. ಕುವೆಂಪುರವರು ತಮ್ಮ ಕಾವ್ಯ ಮತ್ತು ಕಾದಂಬರಿಯ ಮೂಲಕ ಈ ಪ್ರಕ್ಷೇಪಗಳನ್ನು ಒಡೆಯುವ ಕೆಲಸ ಮಾಡಿದರು. ಕುವೆಂಪು ಅವರ ಹಾದಿಯನ್ನೆ ‘ಸ್ವಾಂತಂತ್ರ ಓಟ’ ಅನುಸರಿಸಿದೆ ಎಂದರು

Advertisement

0 comments:

Post a Comment

 
Top