PLEASE LOGIN TO KANNADANET.COM FOR REGULAR NEWS-UPDATES










ಕೊಪ್ಪಳ: ಜಿಲ್ಲೆಯ ಒಂದು ಭಾಗದಲ್ಲಿ ನಳನಳಿಸುತ್ತಿರುವ ಹಸಿರು. ಬಯಲು ಸೀಮೆಯಲ್ಲಿ ಅಪ್ಪಟ ಮಲೆನಾಡಿನ ವಾತಾವರಣ. ಜತೆಗೇ ಒಂದು ರೀತಿಯ ಆತಂಕ. ಉಕ್ಕಿ ಹರಿಯುವ ತುಂಗಭದ್ರೆ ಏನಾದರೂ ಅವಾಂತರ ಸೃಷ್ಟಿಸಿಯಾಳೇ ಎಂಬ ಸಣ್ಣ ಅಳುಕು. ಅದರ ಮಧ್ಯೆ ಮೈಬಗ್ಗಿಸಿ ದುಡಿಯುವ ರೈತಾಪಿ ಜನ...

ಇದು ಜಿಲ್ಲೆಯ ಬಯಲು ಸೀಮೆಯ ಕೊಪ್ಪಳ ತಾಲ್ಲೂಕಿನ ಶಿವಪುರ, ಹುಲಿಗಿ, ಗಂಗಾವತಿ ತಾಲ್ಲೂಕಿನ ಸಣಾಪುರ, ಅಂಜನಾದ್ರಿ ಪರ್ವತ ಪ್ರದೇಶ, ಆನೆಗೊಂದಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಕಂಡುಬರುವ ಚಿತ್ರಣ. ಇದು ಒಂದೆಡೆಯಾದರೆ, ಕಳೆದ ಮೂರು ನಾಲ್ಕು ದಿನಗಳಿಂದ ಹನಿಮಳೆಯೂ ಸುರಿಯದ ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ ತಾಲ್ಲೂಕುಗಳ ಪ್ರದೇಶದ ಚಿತ್ರವೇ ಬೇರೆ. ಒಮ್ಮೆ ಭೂಮಿಯನ್ನು ಒದ್ದೆ ಮಾಡಿ, ರೈತರನ್ನು ಹಸನ್ಮುಖಿಯಾಗಿಸಿದರೆ ಮತ್ತೆ ಕಾಣಿಸದ ಮಳೆ ಈ ಭಾಗಗಳ ರೈತರ ಮುಖದಲ್ಲಿ ಆತಂಕದ ಗೆರೆ ಮೂಡಿಸಿದೆ.
ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ 1,29,637 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು ನದಿ, ಕಾಲುವೆ ತುಂಬಿ ಹರಿಯುತ್ತಿವೆ. ತುಂಬಿದ ತುಂಗಭದ್ರೆಯನ್ನು ನೋಡಲು ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಸಣಾಪುರ ಭಾಗದಲ್ಲಿ ನದಿ ಭೋರ್ಗರೆದು ಹರಿಯುತ್ತಿದೆ. ಏನಾದರೂ ಅಪಾಯ ಸಂಭವಿಸುವ ಆತಂಕದ ಹಿನ್ನೆಲೆಯಲ್ಲಿ ಜನರು ತೆಪ್ಪಗಳನ್ನು ಸಜ್ಜಾಗಿ ಇರಿಸಿದ್ದಾರೆ. ಕೆಲವೆಡೆ ಬಾಳೆ ತೋಟಕ್ಕೂ ನೀರು ನುಗ್ಗಿದೆ. ಹಂಪಿಯ ವಿರೂಪಾಪುರ ಗಡ್ಡೆ ಸೇರಿದಂತೆ ಸಣಾಪುರ ಭಾಗದ ನದಿ ಮಧ್ಯೆ ಇರುವ ಗಡ್ಡೆ ಪ್ರದೇಶಗಳು ಜಲಾವೃತವಾಗಿವೆ. ಕೆಲವೆಡೆ ಜನರು ಸ್ಥಳಾಂತರಗೊಂಡಿದ್ದರೆ, ವಿರೂಪಾಪುರ ಗಡ್ಡೆಯಲ್ಲಿ ವಿದೇಶಿಯರು ಸೇರಿದಂತೆ ಸ್ಥಳೀಯ ಜನರು ಅಲ್ಲಿಯೇ ಉಳಿದಿದ್ದಾರೆ. ನೀರು ಹರಿವಿನ ಪ್ರಮಾಣ ಇಳಿಯಲು ಕನಿಷ್ಠ 15ರಿಂದ 20 ದಿನಗಳು ಬೇಕು ಎಂದು ಸಣಾಪುರ ಗ್ರಾಮಸ್ಥರು ತಿಳಿಸಿದರು. ಬಯಲು ಸೀಮೆಯಲ್ಲಿ ಹನಿಮಳೆ ಸುರಿಯದಿದ್ದರೂ ನದಿ ತುಂಬಿ ಭೂಮಿ ಹಸಿರಾಗಿ ಕಾಣಿಸುವುದು ವಿಶೇಷ

ಸಣಾಪುರ ಕೆರೆ ತುಂಬಿದ್ದು ಅದರ ವೈಭವವೇ ಬೇರೆ. ಕೆರೆಗೆ ಹರಿದುಬರುವ ತುಂಗಭದ್ರೆ ಕಾಲುವೆಯ ನೀರು ಕೆರೆಯಲ್ಲಿ ತುಂಬಿ ಉಕ್ಕಿ ಹರಿಯುತ್ತಿದೆ. ದಂಡೆಯ ಕೆಳಭಾಗದ ರಸ್ತೆಯಲ್ಲಿ ಸಾಗುವವರಿಗೆ ನೀರಿನ ಭರ್ಜರಿ ಸಿಂಚನ. ಇದೇ ದಂಡೆಯ ಮೇಲೆ ನಿಂತು ನೋಡಿದರೆ ಹಸಿರು ಸಿರಿಯ ಸೌಂದರ್ಯ ಆಸ್ವಾದಿಸಬಹುದು. ಕೆರೆ ತುಂಬಿ ಮುಂದಿನ ಹಳ್ಳ ಸೇರಿ ಮತ್ತೆ ಕಾಲುವೆ ಮೂಲಕ ಸಾಗುತ್ತದೆ.

ಜಿಲ್ಲೆಯಲ್ಲಿ ಈ ತಿಂಗಳ ವಾಡಿಕೆ ಮಳೆ 222 ಮಿಲಿಮೀಟರ್. ಇದುವರೆಗೆ 216.6 ಮಿ.ಮೀ ಮಳೆ ಸುರಿದಿದೆ. ಇನ್ನೂ 25 ಮಿಮೀ ಸುರಿದರೂ ಸಾಕಷ್ಟಾಗುತ್ತದೆ. ಆಗಾಗ ಬಂದು ಹೋಗುವ ಜಿಟಿಜಿಟಿ ಮಳೆಯಿಂದ ದೀರ್ಘ ಕಾಲದ ಪ್ರಯೋಜನವಿಲ್ಲ. ಜಿಲ್ಲೆಯಲ್ಲಿ 2,52,500 ಹೆಕ್ಟೇರ್ ಕೃಷಿ ಭೂಮಿಯಿದೆ.

ಅದರಲ್ಲಿ 1,93,911 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ನಾಟಿ ಸಂಪೂರ್ಣವಾಗಿದೆ. ಸುಮಾರು ಶೇ 76.8ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಜಂಟಿ ಕೃಷಿ ನಿರ್ದೇಶಕ ಪದ್ಮಯ ನಾಯ್ಕ ತಿಳಿಸಿದರು   ಕೃಪೆ : ಪ್ರಜಾವಾಣಿ ವಾರ್ತೆ /ಶರತ್ ಹೆಗ್ಡೆ

Advertisement

0 comments:

Post a Comment

 
Top