PLEASE LOGIN TO KANNADANET.COM FOR REGULAR NEWS-UPDATES



ಜವಹರಲಾಲ್ ನೆಹರೂ ಬದಲಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಈ ದೇಶದ ಪ್ರಧಾನಿಯಾಗಿದ್ದರೆ, ಹೇಗಿರುತಿತ್ತು? ಈ ದೇಶ ಇಂದಿನಕ್ಕಿಂತ ಉತ್ತಮ ಸ್ಥಿತಿಯಲ್ಲಿರುತ್ತಿತ್ತೆ? ಇಲ್ಲವೇ ಪರಿಸ್ಥಿತಿ ಇನ್ನೂ ಹದಗೆಡುತಿತ್ತೆ? ಎಂಬ ಬಗ್ಗೆ ನೆಹರೂ ಮತ್ತು ಪಟೇಲ್ ಇಬ್ಬರೂ ತೀರಿಕೊಂಡು ಐದಾರು ದಶಕಗಳು ಗತಿಸಿದ ನಂತರವೂ ಚರ್ಚೆ ನಡೆಯುತ್ತಲೇ ಇದೆ.ಪಟೇಲ್‌ರನ್ನು ಇಷ್ಟಪಡುವವರು ನಿರಂತರವಾಗಿ ನೆಹರೂ ತೇಜೋವಧೆ ಮಾಡುತ್ತಲೇ ಇರುತ್ತಾರೆ. ನೆಹರೂ ಪ್ರಧಾನಿಯಾಗಿದ್ದರಿಂದ ಈ ದೇಶ ಹಾಳಾಗಿ ಹೋಯಿತು ಎಂದು ಇಂದಿಗೂ ಶಪಿಸುತ್ತಾರೆ. ಪಟೇಲರು ಪ್ರಧಾನಿಯಾಗಿದ್ದರೆ, ಹೈದರಾಬಾದ್ ಮೇಲೆ ಸೇನಾ ಕಾರ್ಯಾಚರಣೆ ನಡೆಸಿ, ನಿಜಾಮರ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಿದಂತೆ ಕಾಶ್ಮೀರವನ್ನು ಭಾರತದಲ್ಲಿ ಸೇರಿಸಿಕೊಂಡು ಬಿಡುತ್ತಿದ್ದರು ಎಂಬ ಅಭಿಮಾನದ ಮಾತುಗಳು ಕೇಳಿ ಬರುತ್ತಿರುತ್ತವೆ. ಅಂಧ ರಾಷ್ಟ್ರಾಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಅಖಂಡ ಭಾರತದ ಕನಸು ನನಸಾಗುತ್ತಿತ್ತು ಎಂದು ಕನವರಿಸುತ್ತ ಇರುತ್ತಾರೆ.
ನೆಹರೂ ಅವರನ್ನು ದ್ವೇಷಿಸುವ ವ್ಯಕ್ತಿ-ಶಕ್ತಿಗಳು ಮುಖ್ಯವಾಗಿ ಬಲಪಂಥೀಯ ವಲಯದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಸಾವರ್‌ಕರ್ ಮತ್ತು ಗೋಳ್ವಲ್ಕರ್ ಅವರ ಸೈದ್ಧಾಂತಿಕ ಹಿನ್ನಲೆ ಹೊಂದಿದವರು ನೆಹರೂಗಿಂತ ಪಟೇಲರಿಗೆ ಹೆಚ್ಚು ಇಷ್ಟಪಡುತ್ತಾರೆ. ಇವೆರಡಕ್ಕೂ ಸಂಬಂಧಪಡದ ಅರೆಬರೆ ತಿಳಿವಳಿಕೆ ಹೊಂದಿದವರು ಕೂಡ ಇಂಥದ್ದೇ ಮಾತನ್ನು ಆಡುತ್ತಾರೆ. ಆವರಣದ ಕುಖ್ಯಾತಿಯ ಎಸ್.ಎಲ್.ಭೈರಪ್ಪ ಅವರು ಜವಹರಲಾಲ್ ನೆಹರೂ ಅವರನ್ನು ತೇಜೋವಧೆ ಮಾಡಿ, ಧಾರಾವಾಹಿ ಬರೆಯುತ್ತಲೇ ಇದ್ದಾರೆ. ರಷ್ಯದ ಕಮ್ಯುನಿಸ್ಟ್ ಮಾದರಿಯನ್ನು ಅನುಸರಿಸಿದ್ದೇ ದೇಶದ ದುರಂತಕ್ಕೆ ಕಾರಣ. ಖಾಸಗಿ ರಂಗವನ್ನು ಸೊರಗಿಸಿ, ಸರಕಾರಿ ರಂಗವನ್ನು ಅವರು ಬೆಳೆಸಿದರು. ಅದಕ್ಕಾಗಿ ಭಾರತ ಇಂದು ದುರವಸ್ಥೆಗೀಡಾಗಿದೆ ಎಂದು ವಾದಿಸುತ್ತಾರೆ.
ನೆಹರೂ ಅವರ ಬಗ್ಗೆ ನಾವು ಚಿಕ್ಕಂದಿನಲ್ಲಿದ್ದಾಗ ಜನಜನಿತವಾದ ಹಲವಾರು ಮಾತುಗಳನ್ನು ಕೇಳುತ್ತಿದ್ದೆವು. ನೆಹರೂ ಭಾರಿ ಸಿರಿವಂತರ ಮನೆಯಲ್ಲಿ ಹುಟ್ಟಿದವರು. ಅವರು ಬಟ್ಟೆಗಳು ಇಂಗ್ಲೆಂಡ್‌ನಿಂದ ಇಸ್ತ್ರಿಯಾಗಿ ಬರುತ್ತವೆ. ಕ್ಷೌರ ಮಾಡಿಸಿಕೊಳ್ಳಲು ಅವರು ಅಮೆರಿಕಗೆ ಹೋಗುತ್ತಾರೆ ಎಂದೆಲ್ಲ ಜನ ಆಡುತ್ತಿದ್ದರು. ಅದೇ ರೀತಿ ನೆಹರೂ ಕುಟುಂಬದ ತ್ಯಾಗದ ಬಗೆಗೂ ಅನೇಕ ಹಿರಿಯರು ಹೇಳುತ್ತಿದ್ದರು. ಅಲಹಬಾದ್‌ನ ತಮ್ಮ ಅರಮನೆಯನ್ನು ಮೋತಿಲಾಲ್ ನೆಹರೂ ದೇಶಕ್ಕೆ ನೀಡಿದರು ಎಂದು ಕೇಳುತ್ತಿದ್ದೆವು. ದೊಡ್ಡವರಾಗುತ್ತಾ ಬಂದಂತೆ ನೆಹರೂ ಅವರ ವರ್ಣರಂಜಿತ ಜೀವನದ ಬಗ್ಗೆ ನಾನಾ ಕಥೆಗಳನ್ನು ಪತ್ರಿಕೆಗಳಲ್ಲಿ ಓದತೊಡಗಿದೆವು. ಲೇಡಿ ಮೌಂಟ್‌ಬೆಟನ್ ಮತ್ತು ನೆಹರೂ ಸಂಬಂಧದ ಬಗ್ಗೆ ರಸವತ್ತಾಗಿ ಬರೆದು ಪ್ರಕಟಿಸುವ ಪತ್ರಿಕೆಗಳು ಇವತ್ತಿಗೂ ಇವೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ಸುತ್ತ ಇಂಥ ಕತೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ.
ಸಾವರ್‌ಕರ್ ಮತ್ತು ನಾಥೂರಾಮ ಗೋಡ್ಸೆ ನಡುವೆ ಅಸಹಜ ಸಂಬಂಧವಿತ್ತು ಎಂಬ ಕಥೆಯನ್ನು ಕೆಲವರು ಹೇಳುತ್ತಿದ್ದರು. ಯಾವುದೇ ವ್ಯಕ್ತಿಯ ಖಾಸಗಿ ಜೀವನದ ಬಗ್ಗೆ ಚರ್ಚಿಸುವುದು ಒಳ್ಳೆಯ ಅಭಿರುಚಿ ಅನ್ನಿಸುವುದಿಲ್ಲ. ಇವೆಲ್ಲ ನಿಜವೇ ಇರಬಹುದು.ಇಲ್ಲದಿರಬಹುದು.ಆದರೆ ಭಾರತದ ಪ್ರಧಾನಿಯಾಗಿ ನೆಹರೂ ದೇಶಕ್ಕೆ ನೀಡಿದ ಕೊಡುಗೆ ಏನು? ಅವರ ನಿಲುವುಗಳು ಕಾಲದ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆಯೇ? ವಿರೋಧಿಗಳೆಲ್ಲ ಬಿಂಬಿಸುವಷ್ಟು ಅವರು ಕೆಟ್ಟವರೇ? ಈ ಬಗ್ಗೆ ಯೋಚಿಸಿದಾಗ, ಅವರನ್ನು ದ್ವೇಷಿಸುವ ಆಸಕ್ತ ವಲಯಗಳಿಗಿಂತ ಅವರನ್ನು ಇಷ್ಟಪಡುವ ಕೋಟ್ಯಂತರ ಭಾರತೀಯರು ಆಗಲೂ ಇದ್ದರು. ಈಗಲೂ ಇದ್ದಾರೆ. ಅವರ ಅಭಿಮಾನಿಗಳಲ್ಲಿ ಜಾತಿ-ಮತಗಳ ಭೇದವಿಲ್ಲ.
ರಾಜಕಾರಣಿಗಳಲ್ಲಿ ಅಪರೂಪವಾದ ಚಿಂತನಶೀಲತೆ ನೆಹರೂ ಅವರಿಗೆ ಇತ್ತು. ಇಲ್ಲದಿದ್ದರೆ, ಜೈಲಿನಲ್ಲೇ ಕೂತುಕೊಂಡು ‘ದಿ ಡಿಸ್ಕವರಿ ಆಫ್ ಇಂಡಿಯಾ’ ಮತ್ತು ಜಗತ್ತಿನ ಚರಿತ್ರೆಯನ್ನು ರಚಿಸಲು ಸಾಧ್ಯವಾಗುತ್ತಿರಲಿಲ್ಲ. ಮಗಳು ಇಂದಿರಾಗೆ ಅವರು ಬರೆದ ಪತ್ರಗಳು ಮನುಕುಲದ ಹೆಜ್ಜೆ ಗುರುತುಗಳನ್ನು ದಾಖಲಿಸುತ್ತವೆ.ನೆಹರೂ ಮತ್ತು ಅಂಬೇಡ್ಕರ್ ಇವರಿಬ್ಬರೂ ಇರದಿದ್ದರೆ,ಈ ದೇಶ ಜಾತ್ಯತೀತ ರಾಷ್ಟ್ರವಾಗಿ ಉಳಿಯುತಿತ್ತೆ? ಬಾಪೂಜಿಯವರನ್ನು ಕೊಂದ ಫ್ಯಾಸಿಸ್ಟ್ ಶಕ್ತಿಗಳು ಭಾರತವನ್ನು ಸುರಕ್ಷಿತವಾಗಿಡಲು ಬಿಡುತ್ತಿದ್ದವೇ ಎಂಬ ಪ್ರಶ್ನೆ ಪದೇ ಪದೇ ಕೆಣಕುತ್ತಲೇ ಇರುತ್ತದೆ.
ಜವಹರಲಾಲ್ ನೆಹರೂ ಬಗ್ಗೆ ಬಲಪಂಥೀಯ ಶಕ್ತಿಗಳಿಗೆ ಇರುವುದು ವೈಯಕ್ತಿಕ ದ್ವೇಷವಲ್ಲ. ಅದು ಸೈದ್ಧಾಂತಿಕ ಹಗೆತನ. ನೆಹರೂ ಪ್ರಖಾರ ವೈಚಾರಿಕ ದೃಷ್ಟಿಕೋನವನ್ನು ಹೊಂದಿದ್ದರು. ಮೂಢನಂಬಿಕೆ, ಕಂದಾಚಾರಗಳನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದರು.ಯಾವುದೇ ದೇವಾಲಯಗಳಿಗೆ ದರ್ಶನ ಕೊಡುತ್ತಿರಲಿಲ್ಲ. ಜಾತ್ಯತೀತೆಗೆ ಅವರ ಬದ್ಧತೆ ಅಚಲವಾಗಿತ್ತು. ಕಾರ್ಲ್‌ಮಾರ್ಕ್ಸ್‌ರ ಚಾರಿತ್ರಿಕ ಭೌತಿಕವಾದದ ಬೆಳಕಿನಲ್ಲಿ ಜಗತ್ತಿನ ಮತ್ತು ಭಾರತದ ಅಧ್ಯಯನವನ್ನು ಅವರು ಕೈಗೊಂಡಿದ್ದರು.ಅಂತಲೇ ಅವರು ಭಾರತದ ಮೂಲನಿವಾಸಿಗಳು ಯಾರು? ಹೊರಗಿನಿಂದ ಬಂದವರು ಯಾರು? ಬೌದ್ಧ ಧರ್ಮ ಈ ದೇಶಕ್ಕೆ ನೀಡಿದ ಕೊಡುಗೆ ಏನು ಎಂಬುದರ ಬಗ್ಗೆ ತಮ್ಮ ಕೃತಿಗಳಲ್ಲಿ ವೈಜ್ಞಾನಿಕ ವಿಶ್ಲೇಷಣೆ ಮಾಡಿದ್ದಾರೆ. ದೇವರನ್ನು ನಂಬದ ನೆಹರೂ ಗಾಂಧೀಜಿಯವರನ್ನು ಮಾತ್ರ ದೇವರ ಸಮಾನ ಎಂದು ಗೌರವಿಸುತ್ತಿದ್ದರು. ಗಾಂಧೀಜಿಯು ಈ ನಾಸ್ತಿಕ ಶಿಷ್ಯವನ್ನು ಇಷ್ಟಪಡುತ್ತಿದ್ದರು. ಇವರಿಬ್ಬರನ್ನು ಬೆಸೆದ ಕೊಂಡಿ ಮನುಷ್ಯತ್ವದ ಬಗೆಗಿನ ಕಾಳಜಿ.
ಈ ದೇಶದ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ ಗಾಂಧೀಜಿಯ ಬಲಗೈಯಂತೆ ಕೆಲಸ ಮಾಡಿದರು.ಗಾಂಧಿ ಮಾರ್ಗ ಒಪ್ಪದ ಸುಭಾಷ್‌ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ತಮ್ಮದೇ ದಾರಿಯಲ್ಲಿ ಸಾಗಿದರು.ಆದರೆ ಇಡೀ ಹೋರಾಟದಲ್ಲಿ ಎಂದೂ ಪಾಲ್ಗೊಳ್ಳದೇ ನಿರಂತರ ದ್ರೋಹವೆಸಗುತ್ತ ಬಂದ ಸಂಘಟನೆ ಆರೆಸ್ಸೆಸ್ ಹೆಡಗೆವಾರ್ ಮತ್ತು ಗೋಳ್ವಲ್ಕರ್‌ರು ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಎಂದಿಗೂ ಮಾತನಾಡಲಿಲ್ಲ. ಸ್ವಾತಂತ್ರಕ್ಕಿಂತ ಶ್ರೇಣೀಕೃತವಾದ ಹಿಂದೂರಾಷ್ಟ್ರ ಸ್ಥಾಪನೆ ಅವರ ಆಸಕ್ತಿಯ ವಿಷಯವಾಗಿತ್ತು.ಅಂತಲೇ ನೆಹರೂ ಅವರನ್ನು ವಿರೋಧಿಸುತ್ತಲೇ ಬಂದರು. ಭಾರತದಲ್ಲಿ ಫ್ಯಾಸಿಸಂ ಬಂದರೆ, ಅದು ಇಂದು ಕೋಮುವಾದದ ಮೂಲಕ ಬರುತ್ತದೆ ಎಂದು ನೆಹರೂ ಅಂದೇ ಎಚ್ಚರಿಕೆ ನೀಡಿದ್ದರು.
ದೇಶಕ್ಕೆ ಸ್ವಾತಂತ್ರ ಬಂದಾಗ, ಭಾರತದ ಪ್ರಧಾನಿ ಯಾರು ಆಗಬೇಕು ಎಂಬ ಪ್ರಶ್ನೆ ಉದ್ಭವಿಸಿತು. ಜಿನ್ನಾ ಪ್ರತ್ಯೇಕಗೊಂಡ ನಂತರ ನೆಹರೂ ಮತ್ತು ಪಟೇಲ್‌ರಲ್ಲಿ ಪೈಪೋಟಿ ಆರಂಭವಾಯಿತು. ಆಗ ಗಾಂಧೀಜಿ ಯಾರ ಹೆಸರನ್ನು ಸೂಚಿಸುತ್ತಾರೋ ಅವರೇ ಪ್ರಧಾನಿ ಆಗಬೇಕು ಎಂದು ಒಮ್ಮತಕ್ಕೆ ಬರಲಾಯಿತು.ಗುಡಿ-ಗುಂಡಾರಗಳಿಗೆ ಹೋಗುತ್ತಿದ್ದ ಧಾರ್ಮಿಕ ಮನೋಭಾವದ ಪಟೇಲರು ಗಾಂಧೀಜಿಗೆ ಹತ್ತಿರದವರಾಗಿದ್ದರು. ಅವರ ಹೆಸರನ್ನೇ ಗಾಂಧಿ ಸೂಚಿಸುತ್ತಾರೆ ಎಂದು ಅನೇಕರು ಭಾವಿಸಿದ್ದರು.ಆದರೆ ವೈಚಾರಿಕವಾಗಿ ತನ್ನ ನಿಲುವುಗಳನ್ನು ವಿರೋಧಿಸುತ್ತಾ ಬಂದ ನೆಹರೂ ಹೆಸರನ್ನು ಬಾಪೂಜಿ ಸೂಚಿಸಿದರು.ಭಾರತದಂತಹ ಬಹುಧರ್ಮೀಯ, ಬಹುಭಾಷಿಕ, ವೈವಿಧ್ಯಮಯ ದೇಶಕ್ಕೆ ಆಧುನಿಕ ಮನೋಧರ್ಮದ ನೆಹರೂ ಅವರಂತಹ ಜಾತ್ಯತೀತವಾದಿಯೇ ಸೂಕ್ತ ಪ್ರಧಾನಿ ಎಂಬುದು ಗಾಂಧೀಜಿಯ ನಿಲುವಾಗಿತ್ತು.
ನೆಹರೂ ಪ್ರಧಾನಿಯೇನೋ ಆದರು. ಆದರೆ ಸರ್ದಾರ್ ಪಟೇಲ್ ಮತ್ತು ಅವರಿಗೆ ಹೊಂದಾಣಿಕೆಯಾಗಲಿಲ್ಲ. ದೇಶ ವಿಭಜನೆ ಕಾಲದಲ್ಲಿ ಎರಡು ಕಡೆ ರಕ್ತಪಾತ ನಡೆಯಿತು.ಆಗ ದಿಲ್ಲಿಯಲ್ಲಿ ಮುಸಲ್ಮಾನರ ಮೇಲೆ ಉದ್ರಿಕ್ತ ಗುಂಪುಗಳು ದಾಳಿ ಆರಂಭಿಸಿದವು.ಪರಿಸ್ಥಿತಿ ಕೈಮೀರಿ ಹೋದಾಗಲೂ ಗೃಹಸಚಿವ ಪಟೇಲ್ ಸುಮ್ಮನಿದ್ದರು.ಇದರಿಂದ ಕೆರಳಿ ಕೆಂಡವಾದ ನೆಹರೂ ದಂಗೆ ತಡೆಯಲು ಸೇನಾ ಕಾರ್ಯಾಚರಣೆಗೆ ಆದೇಶ ನೀಡಿದರು.ಗಾಂಧಿ ಹತ್ಯೆಯ ಸುಳಿವು ಅಂದಿನ ಗೃಹಸಚಿವರಿಗೆ ಮೊದಲೇ ತಿಳಿದಿತ್ತು ಎಂಬ ಆರೋಪಗಳು ಕೇಳಿ ಬಂದವು. ನೆಹರೂ ಮೇಲೆ ಇಂಥ ಆರೋಪ ಬರಲಿಲ್ಲ. ಇದಕ್ಕೆ ಕಾರಣ ಅವರ ಜಾತ್ಯತೀತ ವ್ಯಕ್ತಿತ್ವ.
ನೆಹರೂ ಸಮಾಜವಾದದ ಬಗ್ಗೆ ಹೇಳುತ್ತಿದ್ದರೂ ಅವರದ್ದು ಸಮ್ಮಿಶ್ರ ಸಮಾಜವಾದ ಎಂದು ಕಮ್ಯುನಿಸ್ಟರು ಛೇಡಿಸುತ್ತಿದ್ದರು. ಆದರೆ ಪಟೇಲ್ ಮತ್ತು ನೆಹರೂ ಆಯ್ಕೆಯ ಪ್ರಶ್ನೆ ಬಂದಾಗ, ಅವರ ಆಯ್ಕೆ ನೆಹರೂ ಆಗಿದ್ದರು.ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಈ ದೇಶದ ಆರ್ಥಿಕ ನೀತಿ ಹೇಗಿರಬೇಕು ಎಂಬ ಬಗ್ಗೆ ನೆಹರೂಗೆ ಖಚಿತ ನಿಲುವು ಇತ್ತು. ಸಂಪೂರ್ಣ ರಾಷ್ಟ್ರೀಕರಣ ಮಾಡಲು ಸಾಧ್ಯವಿರಲಿಲ್ಲ.ಆದರೆ ಖಾಸಗಿ ವಲಯಕ್ಕೆ ಪರ್ಯಾಯವಾಗಿ ಸಾರ್ವಜನಿಕ ಉದ್ಯಮರಂಗವನ್ನು ಬೆಳೆಸುವಲ್ಲಿ, ಬೃಹತ್ ಉದ್ಯಮಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಾರ್ಖಾನೆಗಳು ಆಧುನಿಕ ದೇವಾಲಯಗಳು ಎಂದು ಕರೆದರು. ಅದಕ್ಕಿಂತ ಮುಖ್ಯವಾಗಿ ಭಾರತಕ್ಕೆ ಅತ್ಯಂತ ಸೂಕ್ತವಾದ ಸ್ವತಂತ್ರ ವಿದೇಶಾಂಗ ನೀತಿಯನ್ನು ರೂಪಿಸಿದ ಶ್ರೇಯಸ್ಸು ನೆಹರೂ ಅವರಿಗೆ ಸಲ್ಲುತ್ತದೆ. ಈಜಿಪ್ಟ್‌ನ ನಾಸೇರ್ ಮತ್ತು ಯುಗೋಸ್ಲಾವಿಯಾದ ಟಿಟೋ ಜೊತೆ ಸೇರಿ ಅಲಿಪ್ತ ಚಳವಳಿಯನ್ನು ನೆಹರೂ ಕಟ್ಟಿ ಬೆಳೆಸಿದರು.
ಇಂಥ ನೆಹರೂ ಅವರನ್ನು ಬಲಪಂಥೀಯ ಕೋಮುವಾದಿ ಶಕ್ತಿಗಳು ದ್ವೇಷಿಸುವುದು ಅಶ್ಚರ್ಯಕರವೇನಲ್ಲ.ಆದರೆ ನೆಹರೂರವರ ಕಾಂಗ್ರೆಸ್ ಪಕ್ಷದವರೇ ಅವರ ವಿದೇಶಾಂಗ ನೀತಿಯನ್ನು ಹೂತುಹಾಕಲು ಯತ್ನಿಸುತ್ತಿದ್ದಾರೆ. ಮನಮೋಹನ್ ಸಿಂಗ್,ಅಹ್ಲುವಾಲಿಯ,ಚಿದಂಬರಂ ಗ್ಯಾಂಗು ನೆಹರೂ ಅವರ ಆರ್ಥಿಕ ನೀತಿಗೆ ಎಳ್ಳುನೀರು ಬಿಟ್ಟಿದೆ. ಸಾರ್ವಜನಿಕ ಉದ್ಯಮ ವಲಯವನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗುತ್ತಿದೆ.ಇವರು ಉಂಟು ಮಾಡಿದ ಜಾಗತೀಕರಣದ ಮಾಲಿನ್ಯದಿಂದ ಈ ದೇಶದಲ್ಲಿ ಕೋಮುವಾದಿ ಕೀಟಾಣುಗಳು ಹುಟ್ಟುಕೊಂಡಿವೆ.
ಈ ಸನ್ನಿವೇಶದಲ್ಲಿ ನೆಹರೂ ಮತ್ತೆ ನೆನಪಿಗೆ ಬರುತ್ತಾರೆ. ಭೈರಪ್ಪನಂತಹವರು ನೆಹರೂ ಅವರನ್ನು ಇಂದಿಗೂ ದ್ವೇಷಿಸುತ್ತಾರೆ ಎಂದರೆ,ನೆಹರೂ ತಮ್ಮ ಪ್ರಸ್ತುತತೆಯನ್ನು ಉಳಿಸಿಕೊಂಡಿದ್ದಾರೆ ಎಂದೇ ಅರ್ಥ. ಈ ದೇಶದ ಸೌಹಾರ್ದ ಪರಂಪರೆಗೆ ನೆಹರೂ ನೀಡಿದ ಕೊಡುಗೆ ಸಾಮಾನ್ಯವಾದುದಲ್ಲ

Advertisement

0 comments:

Post a Comment

 
Top