PLEASE LOGIN TO KANNADANET.COM FOR REGULAR NEWS-UPDATES



ಕಿಶನರಾವ್ ಕುಲಕರ್ಣಿ
ಹನುಮಸಾಗರ: ಪಾಂವ್ಕ... ಪಾಂವ್ಕ ಎಂದು ಅದೇ ಹಳೆ ಮಾಮೂಲಿ ಹಾರ್ನ ಮಾಡುತ್ತಾ ಬರಬೇಕಾಗಿದ್ದ ಸರ್ಕಾರಿ ಬಸ್ ಇಂದು ಹಚ್ಚೇವು ಕನ್ನಡದ ದೀಪ ಕರುನಾಡ ದೀಪ..., ಬಾರಿಸು ಕನ್ನಡ ಡಿಂಡಿಮವಾ ಓ ಕರ್ನಾಟಕ ಹೃದಯಶಿವಾ.... ಕನ್ನಡ ನಾಡಿನ ಜೀವ ನದಿ ಕಾವೇರಿ... ಹೀಗೆ ಕನ್ನಡ ಗೀತೆಗಳನ್ನು ಹಾಡುತ್ತಾ ಬರುತ್ತಿತ್ತು. ದಾರಿ ಹೋಕರು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತಾಪಿ ಜನರು ಕೊಂಚ ಕೈಯಲ್ಲಿದ್ದ ಕೆಲಸ ಬಿಟ್ಟು ಈ ಬಸ್‌ನತ್ತ ಆಕರ್ಷಿತರಾಗುತ್ತಿದ್ದುದು ಮಂಗಳವಾರ ಕಂಡು ಬಂದಿತು.

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕುಷ್ಟಗಿ ಘಟಕದಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಧಾರವಾಡ ಮೂಲದ ಹನುಮಂತಪ್ಪ ಬಡಿಗೇರ ಎಂಬುವವರು ಈ ರೀತಿ ಬಸ್ ಶೃಂಗಾರ ಮಾಡಲು ಕಾರಣರಾದವರು.
ಕಳೆದ ಹತ್ತಾರು ವರ್ಷದಿಂದ ಕರ್ನಾಟಕ ರಾಜ್ಯೋತ್ಸವದ ದಿನದಂದು ತಮ್ಮ ಬಸ್ ಮೇಲೆ ಧ್ವನಿವರ್ಧಕ ಕಟ್ಟಿ ತಮ್ಮ ಅಂದಿನ ಸೇವಾ ಸಮಯ ಮುಗಿಯುವವರೆಗೂ ಹೀಗೆ ಹಾಡು ಮೊಳಗಿಸುತ್ತಲೇ ಇರುತ್ತಾರೆ. 

ಬಸ್‌ನ ಮುಂಭಾಗದಲ್ಲಿ ಆಳೆತ್ತರದ ಭುವನೇಶ್ವರಿಯ ಭಾವಚಿತ್ರ, ಒಳಗಡೆ ಪುಟ್ಟರಾಜ ಗವಾಯಿಗಳ ಭಾವಚಿತ್ರ, ಬಸ್‌ನ ಸುತ್ತಲೂ ವಿವಿಧ ಹೂಗಳಿಂದ ಪೋಣಿಸಿದ ಹಾರ, ಬಸ್‌ನ ಎಡಭಾಗದಲ್ಲಿ ನಾಡಿನ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳು, ಬಲಭಾಗದಲ್ಲಿ ಕನ್ನಡ ನಾಡಿನ ವೈಭವ ಸಾರುವ ಕೆತ್ತನೆಗಳ ದೃಶ್ಯಗಳು, ಹಿಂಭಾಗದಲ್ಲಿ ನೆಲ,ಜಲ,ಭಾಷೆ ಸಾರುವ ನಾಮಫಲಕಗಳ ಸಾಲು. ಇನ್ನು ಬಸ್‌ನ ಒಳಗಡೆ ಬಣ್ಣದ ಪರಪರಿ, ಹೂವಿನ ಅಲಂಕಾರ ತುಂಬಿತ್ತು.

ಬಸ್ ಮೊದಲನೆ ಸ್ಥಳದಿಂದ ಹೊರಡುವಾಗ ಒಳಗಡೆ ಇದ್ದ ಎಲ್ಲ ಪ್ರಯಾಣಿಕರಿಗೆ ಶುಭಾಷಯ ಕೋರುವುದರ ಜೊತೆಗೆ ಸಿಹಿ ವಿತರಣೆ ಮಾಡಿದ್ದಾರಂತೆ. ಅಲ್ಲದೆ ಇಂದಿನ ಎಲ್ಲ ಕನ್ನಡ ದಿನಪತ್ರಿಕೆಗಳನ್ನು ಪ್ರಯಾಣಿಕರು ಉಚಿತವಾಗಿ ಓದುವ ಭಾಗ್ಯವನ್ನು ಈ ನಿರ್ವಾಹಕ ಒದಗಿಸಿಕೊಟ್ಟಿದ್ದಾರೆ.

ಕನ್ನಡ ಭಾಷೆಯ ಮೇಲೆ ಅತೀವ ಕಾಳಜಿ ಹೊಂದಿರುವ ಈ ನಿರ್ವಾಹಕ ಹಿಂದೊಮ್ಮೆ ತಮ್ಮ ಸ್ಥಿರ ರೂಟ್ ಬಸ್‌ನಲ್ಲಿ ಪ್ರಯಾಣಿಕರಿಗೆ ಓದಲೆಂದು ಪುಟ್ಟದೊಂದು ಗ್ರಂಥಾಲಯವನ್ನೇ ತೆರೆದಿದ್ದರು. ಆದರೆ ಲವಲವಿಕೆಯಿಂದ ಓದಿದ ನಂತರ ಪ್ರಯಾಣಿಕರು ಪುಸ್ತಕಗಳನ್ನು ಮರಳಿ ಬುಕ್‌ರ‌್ಯಾಕ್‌ನಲ್ಲಿ ಸೇರಿಸದೇ ತಮ್ಮ ಬ್ಯಾಗುಗಳಿಗೆ ಸೇರಿಸುತ್ತಿದ್ದರಿಂದ ವಾರದಲ್ಲಿ ನೂರಾರು ಪುಸ್ತಕಗಳು ಮಾಯವಾದವಂತೆ. ಸದ್ಯ ಗ್ರಂಥಾಲಯ ಬದಲಿಗೆ ನಿತ್ಯ ಕನ್ನಡ ದಿನ ಪತ್ರಿಕೆಗಳನ್ನು ಪ್ರಯಾಣಿಕರಿಗೆ ನೀಡುತ್ತಿದ್ದಾರೆ.

ಕನ್ನಡ ನಾಡಿನಲ್ಲಿ ಹುಟ್ಟಿದ ನಾನು ಈ ದಿನದಂದು ಭಾಷೆಯ ಅಭಿಮಾನಕ್ಕಾಗಿ, ಬೆಳವಣಿಗೆಗಾಗಿ, ಪ್ರಸಾರದ ಉದ್ದೇಶದಿಂದ ಈ ಪರಿಯಲ್ಲಿ ಸುಮಾರು 10 ವರ್ಷಗಳಿಂದ ಕೈಲಾದ ಸೇವೆ ಮಾಡುತ್ತಾ ಬಂದಿದ್ದೇನೆ, ನೋಡಿದವರು ಖುಷಿ ಪಟ್ಟಿದ್ದಾರೆ ನನಗೆ ಅಷ್ಟೆ ಸಾಕು ಎಂದು ಹನುಮಂತಪ್ಪ ಬಡಿಗೇರ ಹೇಳಿದರು.

ವಿವಿಧ ನಿಲ್ದಾಣಗಳಲ್ಲಿ ಬಸ್ ನಿಲ್ಲುತ್ತಿದ್ದಂತೆ ಆಯಾ ನಿಲ್ದಾಣದಲ್ಲಿರುವ ನೂರಾರು ಪ್ರಯಾಣಿಕರು ಬಸ್‌ನ ಒಳಗಡೆ ಬಂದು ನೇತಾಕಿರುವ ಕನ್ನಡ ಆಕರ್ಷಕ ಫಲಕಗಳನ್ನು ಓದುತ್ತಾ ನಿಲ್ಲುವುದು, ಬಸ್‌ಗೆ ಸುತ್ತುವರೆದು ಪೋಷ್ಟರ್‌ಗಳನ್ನು ವೀಕ್ಷಣೆ ಮಾಡುವುದು, ಬಸ್ ಮುಂದೆ ನಿಂತು ಕನ್ನಡ ಹಾಡು ಕೇಳುವುದು ಸಾಮಾನ್ಯ ದೃಶ್ಯವಾಗಿತ್ತು.  ಕೃಪೆ : ಪ್ರಜಾವಾಣಿ

Advertisement

0 comments:

Post a Comment

 
Top