PLEASE LOGIN TO KANNADANET.COM FOR REGULAR NEWS-UPDATES

  2013 ರ ಜನವರಿ 26 ರಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ನವದೆಹಲಿಯಲ್ಲಿ ನಡೆಯಲಿರುವ
ವಿವಿಧ ರಾಜ್ಯಗಳ ಸ್ತಬ್ಧ ಚಿತ್ರ ಪರೇಡ್ ನಲ್ಲಿ ಕರ್ನಾಟಕ ರಾಜ್ಯದ ವತಿಯಿಂದ
ವಾರ್ತಾ ಇಲಾಖೆ ಮೂಲಕ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಕುರಿತ ಸ್ತಬ್ಧ ಚಿತ್ರ
ನವದೆಹಲಿ ಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಈಬಾರಿ ಅನಾವರಣ ಗೊಳ್ಳಲಿದೆ












     ಕರ್ನಾಟಕದಲ್ಲಿ ಹಲವಾರು ಚಿತ್ರ ಶೈಲಿಗಳು ಪರಂಪರೆಯಿಂದ ಬೆಳೆದು ಬಂದಿದೆ. ಅವುಗಳಲ್ಲಿ ಕೆಲವು ಇಂದು ಕಣ್ಮರೆಯಾಗಿವೆ. ಇದಕ್ಕೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳು ಕಾರಣವಿರಬಹುದು. ಇಲ್ಲವೆ, ವ್ಯತಸ್ತ ಮೌಲ್ಯಗಳು, ಬದಲಾದ ಅಭಿರುಚಿ ಕಾರಣವಿರಬಹುದು. ಹೀಗಾಗಿ ಇಂದು, ಆಧುನಿಕ ಕಲಾತ್ಮಕ ಸಂಶೋಧನೆ, ಆವಿಷ್ಕಾರಗಳನ್ನು ಮೈಗೂಡಿಸಿಕೊಳ್ಳಲೂ ಆಗದೆ, ಅತ್ತ ಪರಂಪರೆಯಿಂದ ಬಂದ ಮೂಲಶೈಲಿಯನ್ನು ಬಿಡಲು ಸಾಧ್ಯವಾಗದೆ ಒಂದು ಸಂದಿಗ್ದ ಪರಿಸ್ಥಿತಿ ಸಾಂಪ್ರದಾಯಿಕ ಚಿತ್ರ ಕಲಾವಿದರಿಗೆ ಉಂಟಾಗಿದೆ. ಪರಂಪರಾಗತವಾಗಿ ಬಂದ ಇಂತಹ ಚಿತ್ರಶೈಲಿಗಳ ಇತಿಹಾಸ ಆಶ್ಚರ್ಯ ಮೂಡಿಸುತ್ತದೆ. ಕುತೂಹಲ ಉಂಟುಮಾಡುತ್ತದೆ.

   
 ಕಿನ್ನಾಳ ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲೂಕಿನಲ್ಲಿರುವ ಒಂದು ಗ್ರಾಮ. ಅದು ಕೊಪ್ಪಳದಿಂದ ಕೇವಲ ಹನ್ನೊಂದು ಕಿ.ಮೀ. ದೂರದಲ್ಲಿದೆ. ಕಿನ್ನಾಳದ ಇತಿಹಾಸ ವಿಜಯನಗರ ಅರಸರ ಕಾಲದಷ್ಟು ಹಿಂದಿನದು. ಕಿನ್ನಾಳ ಮೊದಲು ವಿಜಯನಗರ ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ಅನಂತರ ಕೊಪ್ಪಳದ ನವಾಬರ ಆಡಳಿತ ಪರಿಧಿಗೆ ಬಂದಿತು. ಹೀಗಾಗಿ ಹಿಂದೂ-ಮುಸ್ಲಿಮ್ ಸಾಮರಸ್ಯವನ್ನು ಅಲ್ಲಿನ ನಿತ್ಯ ಜೀವನದಲ್ಲಿ ಕಾಣಬಹುದು. ಅದೇ ರೀತಿ ದಖನಿ ಸುಲ್ತಾನರ ಮಿನಿಯೇಷರ್ ಶೈಲಿಯ ಅಂಶಗಳನ್ನು ಸಹ ಕಿನ್ನಾಳ ಚಿತ್ರ ಶೈಲಿಯಲ್ಲಿ ಗಮನಿಸಬಹುದು. ಇಲ್ಲಿನ ಚಿತ್ರಗಾರ ಕುಟುಂಬ ವಂಶಪಾರಂಪರ್‍ಯವಾಗಿ ಚಿತ್ರಶೈಲಿಯನ್ನು ರೂಢಿಸಿಕೊಂಡು ಬಂದಿದೆ. ಚಿತ್ರಕಲೆ ಅವರ ಕುಲಕಸುಬೂ ಅಹುದು. ತುತ್ತಿನ ಚೀಲ ತುಂಬಿಸಲು ಆಧಾರವೂ ಅಹುದು. ಇಂದಿಗೂ ಆ ಕುಟುಂಬದವರು ಚಿತ್ರಕಲೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ವಿಜಯನಗರದ ಅರಸರ ಕಾಲದಲ್ಲಿ ದೇವಸ್ಥಾನ ರಥಗಳ ಅಲಂಕಾರ, ಆಲಂಕಾರಿಕ ಚಿತ್ರರಚನೆ ಮಾಡಿಕೊಂಡಿದ್ದ ಕಿನ್ನಾಳ ಕಲಾವಿದರು ವಿಜಯನಗರದ ಪತನಾನಂತರ ವಲಸೆಹೋಗಬೇಕಾಯಿತು. ಕಲೆಯನ್ನು ಪೋಷಿಸುವ ಪ್ರೋತ್ಸಾಹಿಸುವ ಆಶ್ರಯದಾತರು ಇಲ್ಲದೆ ಸೂಕ್ತ ಅವಕಾಶಗಳ ಅಭಾವದಿಂದಾಗಿ ಕಿನ್ನಾಳ ಚಿತ್ರಗಾರ ಕಲಾವಿದರು ಗುಂಪು ಗುಂಪಾಗಿ ಬೇರೆ ಬೇರೆ ಭಾಗಗಳಿಗೆ ಹೋದರು. ಕೆಲವರು ಆಂದ್ರಪ್ರದೇಶದ ಅನಂತಪುರ, ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿ ಮುಂತಾದ ಭಾಗಗಳಲ್ಲಿ ನೆಲಸಿದರು. ಹಾಗೆ ವಲಸೆ ಬಂದು ನೆಲಸಿದವರಲ್ಲಿ ಕಿನ್ನಾಳ ಕಲಾವಿದರೂ ಸೇರುತ್ತಾರೆ. ಇವರು ’ಚಿತ್ರಗಾರ’ ಕುಟುಂಬದವರೆಂದೇ ಖ್ಯಾತರಾಗಿದ್ದಾರೆ. ಅಂತೆ ಬೇರೆ ಭಾಗಗಳ ಕಲಾವಿದರನ್ನೂ ಸಹ ’ಚಿತ್ರಗಾರ’ ಹೆಸರಿನಿಂದಲೇ ಕರೆಯುವುದು ರೂಢಿಯಲ್ಲಿ ಬಂದಿದೆ. ಕಲಾತ್ಮಕ ಕಾರ್ಯಗಳ ನಿರ್ವಹಣೆ, ಚಿತ್ರರಚನೆ ಅವರ ಬದುಕಿನ ಆಧಾರವಾಗಿ, ಭಾಗವಾಗಿ ಇಂದಿಗೂ ಉಳಿದು ಬಂದಿದೆ. 


ಇಂದಿನ ಕಿನ್ನಾಳ ಕಲಾವಿದರು ಪರಂಪರೆಯ ಕಿನ್ನಾಳ ಶೈಲಿಯ ರಚನಾಕ್ರಮವನ್ನು ಅನುಸರಿಸುತ್ತಿಲ್ಲ. ಬದಲಾಗುತ್ತಿರುವ ಕಾಲ, ಜನರ ಅಭಿರುಚಿಗಳಿಗೆ ತಕ್ಕಂತೆ ವಸ್ತು ಮತ್ತು ರೂಪಗಳನ್ನು ಬದಲಾಯಿಸಿ ಕೊಂಡಿದ್ದಾರೆ. ಆದರೂ ಕೂಡ ಪರಂಪರೆಯಿಂದ ಬಂದ ವಿಜಯನಗರ ಭಿತ್ತಿಚಿತ್ರಗಳ ಶೈಲಿಯ ಹಲವಾರು ಅಂಶಗಳು ಇಂದಿಗೂ ಉಳಿದು ಬಂದಿರುವುದು ಗಮನಾರ್ಹ ವಿಷಯ. ಇಂದಿನ ಚಿತ್ರಗಾರ ಕಲಾವಿದರು ಹಲವಾರು ಹೊಸರೂಪಗಳನ್ನು ವಿನ್ಯಾಸಗಳನ್ನು ತಮ್ಮ ರಚನೆಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಜಾನಪದ ಕಲೆಯ ಸೊಬಗನ್ನು ಮೈಗೂಡಿಸಿ ಕೊಂಡಿರುವುದನ್ನೂ ಕಾಣಬಹುದು. ಕಿನ್ನಾಳ ಕಲಾವಿದರು ಮೂಲತಃ ಪರಂಪರೆಯ ಶೈಲಿಯಲ್ಲಿ ತರಬೇತಿಹೊಂದಿ ಕುಶಲರಾಗಿರುವುದು ವಾಸ್ತವ. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವ್ಯಾಪಾರಿ ಮನೋಭಾವ ಬೆಳೆಸಿಕೊಂಡು ಪರಂಪರೆಯ ಶೈಲಿಗೆ ವಾಣಿಜ್ಯರೂಪ ಕೊಟ್ಟಿರುವುದೂ ವಾಸ್ತವಸಂಗತಿಯಾಗಿದೆ. ಹೀಗೆ ಕಿನ್ನಾಳ ಚಿತ್ರಶೈಲಿ ಎಷ್ಟೇ ಪ್ರಭಾವಗಳಿಗೆ ಒಳಗಾಗಿದ್ದರೂ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿದೆ ಎನ್ನಬಹುದು.
 

    ಕಿನ್ನಾಳ ಚಿತ್ರಗಾರ ಕಲಾವಿದರು ಇಂದು ಮಾಡುವ ಕೃತಿಗಳು, ಕೆತ್ತನೆಯ ಕೆಲಸಗಳು ಹಲವಾರು, ’ವಿಜಯನಗರದ’ ಸಾಂಪ್ರದಾಯಕ ಶೈಲಿಯಲ್ಲಿ ಚಿತ್ರರಚನೆ ಮರದ ಮೂರ್ತಿಗಳನ್ನು ಮಾಡುವುದು, ದೇವಸ್ಥಾನಕ್ಕೆ ಬೇಕಾಗುವ ಉತ್ಸವ ಮೂರ್ತಿಗಳು, ಅವುಗಳ ವಾಹನಗಳನ್ನು ಮಾಡುವುದು, ಗ್ರಾಮದೇವತೆಯ ಕಟ್ಟಿಗೆಯ ಮೂರ್ತಿಗಳನ್ನು ಬಣ್ಣ ಹಾಕುವುದು, ರಥಗಳ ಅಲಂಕಾರಿಕ ಬೊಂಬೆಗಳು, ನವಗ್ರಹ ದೇವತೆಗಳ ಬೊಂಬೆಗಳು, ಕಿನ್ನಾಳ ಗೌರಿಯೆಂದೇ ಪ್ರಸಿದ್ಧವಾಗಿರುವ ಕಟ್ಟಿಗೆಯ ’ಗೌರಿ’ ವಿಗ್ರಹ, ಇವುಗಳ ಜೊತೆಗೆ, ಇಂದು ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ತೊಟ್ಟಿಲು, ಫಲಪುಷ್ಪಗಳು, ಕುಳಿತುಕೊಳ್ಳುವ ಕಲಾತ್ಮಕ ಮಣೆಗಳು (ಎಲ್ಲವೂ ಮರದಲ್ಲೆ ಮಾಡುವಂಥವು) ಕಾಮನ ಹಬ್ಬದ (ಕಾಮ ರತಿಯ) ವಿಗ್ರಹಗಳನ್ನು ಮಾಡುತ್ತಾರೆ. ಮತ್ತು ದೇವಸ್ಥಾನದ ಗೋಡೆಗಳ ಮೇಲೆ ಪುರಾಣಗಳಿಗೆ ಸಂಬಂಧಿಸಿದ ಚಿತ್ರರಚನೆಯನ್ನು ಮಾಡುತ್ತಾರೆ. ಈಗಿನ ಅವರ ಚಿತ್ರರಚನೆ ಶಿಲ್ಪ ಕೆತ್ತನೆಗಳನ್ನು ಕೇವಲ ಸಾಂಪ್ರದಾಯಿಕ, ಗತಕಾಲದ್ದು ಎನ್ನುವಂತಿಲ್ಲ. ಅದು ಅವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇಂದಿನ ಕಾಲದ ಜೀವನಗತಿಗೆ ಸ್ಪಂದಿಸುತ್ತ ಹೊಸ ವಿಷಯ, ವಸ್ತುಗಳನ್ನು ಪರಂಪರೆಯ ಶೈಲಿಯಲ್ಲಿ ವ್ಯಕ್ತಪಡಿಸುತ್ತ ಇದ್ದಾರೆ.

    ರಚನೆಯ ಶೈಲಿಯಲ್ಲೂ ಹಲವಾರು ಹೊಸ ಅಂಶಗಳನ್ನು ಕಾಣಬಹುದು, ಐತಿಹಾಸಿಕ ಬೆಳವಣಿಗೆಯನ್ನು ಗಮನಿಸಬಹುದು. ವಿಜಯನಗರದ ಚಿತ್ರಶೈಲಿ, ಶಿಲ್ಪಶೈಲಿಗಳಿಂದ ಹಾಗೇ ದಖನಿ ಸುಲ್ತಾನರ ಕಾಲದ ಚಿಕಣಿಚಿತ್ರಗಳ (ಮಿನಿಯೇಚರ್ ಪೇಂಟಿಂಗ್ಸ್) ಶೈಲಿ, ಜೈನ ಓಲೆಗರಿ ಹಸ್ತಪ್ರತಿಗಳು ಚಿತ್ರಶೈಲಿಗಳ ಪ್ರೇರಣೆ ಪ್ರಭಾವಗಳಿಂದ ಕಿನ್ನಾಳ ಶೈಲಿ ರೂಪಗೊಂಡಿದೆ. ರೇಖೆ, ವಿನ್ಯಾಸ, ವರ್ಣ ಸಂಯೋಜನೆ, ಆಕೃತಿಗಳ ರಚನಾ ವಿನ್ಯಾಸಗಳಲ್ಲಿ ಪ್ರಭಾವವನ್ನು ಗುರುತಿಸಬಹುದು. ಹೀಗಾಗಿ ಕಿನ್ನಾಳ ಶೈಲಿಯ ಐತಿಹಾಸಿಕ ಬೆಳವಣಿಗೆಯೂ ಗಮನಾರ್ಹವಾಗಿದೆ.
    ತಾಂತ್ರಿಕ ಬೆಳವಣಿಗೆ :

ಮೊದಲನೆಯದಾಗಿ ಚಿತ್ರರಚನಾ ವಿಧಾನ. ನಾವು ಒಂದು ಚಿತ್ರ ರಚಿಸಬೇಕಾದರೆ ಅದಕ್ಕೆ ಬೇಕಾದ ಮೇಲ್ಮೈಯನ್ನು ತಯಾರಿಸಿಕೊಳ್ಳುವುದು ರೂಢಿ. ಹಾಗೆ ಮಾಡದಿದ್ದರೆ, ಚಿತ್ರರಚನೆ ಅತೃಪ್ತಿಕರವಾಗಬಹುದು. ಹಾಕಿದ ಬಣ್ಣಗಳು ಸರಿಯಾಗಿ ಕೂಡುವುದಿಲ್ಲ. ಅಂದರೆ ಆ ಚಿತ್ರವು ಬೇಗ ಹಾಳಾಗಬಹುದು. ಉದಾಹರಣೆಗೆ ಅಜಂತಾ, ಭಾಗ್, ಎಲ್ಲೋರ, ಸಿತ್ತಾನವಾಸಲ್, ಬಾದಾಮಿಯ (ಇಂದು ಬಾದಾಮಿಯ ಗುಹೆಗಳಲ್ಲಿ ಕೇವಲ ಅಳಿದುಳಿದ ಚಿತ್ರ ಭಾಗಗಳು ಮಾತ್ರ ಸಿಕ್ಕುತ್ತವೆ.) ಗುಹೆಗಳಲ್ಲಿ ಇರುವ ಚಿತ್ರಗಳು ಇದಕ್ಕೆ ಸಾಕ್ಷಿ. ಅಜಂತಾದ ಒಂಬತ್ತು, ಹನ್ನೆರಡು ಮತ್ತು ಹದಿನೇಳನೆಯ ಗುಹೆಗಳಲ್ಲಿರುವ ಚಿತ್ರಗಳನ್ನು ಕ್ರಿ.ಪೂ. ಮೊದಲನೆಯ ಶತಮಾನದಲ್ಲಿ ರಚಿಸಿದ್ದಿರಬಹುದೆಂದು ಊಹಿಸಲಾಗಿದೆ. ಅಂದರೆ ಈ ಶತಮಾನಕ್ಕೆ ಸರಿಯಾಗಿ ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಆ ಚಿತ್ರಗಳು ಇಂದಿಗೂ ಬಹುಪಾಲು ಹಾಗೆಯೇ ಇವೆ. ಇತರ ಹಲವಾರು ಗುಹೆಗಳಲ್ಲಿ ನಾಶ ಆಗಿವೆ, ಆಗುತ್ತಿವೆ. ವಿಜಯನಗರ ಕಾಲದ ಲೇಪಾಕ್ಷಿ (ಹಿಂದೂಪುರ, ಆಂದ್ರ ಪ್ರದೇಶ) ಹಂಪೆಯ ಪಂಪಾಪತಿ ದೇವಸ್ಥಾನದಲ್ಲಿ ರಚಿಸಿದ ಚಿತ್ರಗಳು ಕೂಡಾ ಇದೇ ರೀತಿ ತಾಂತ್ರಿಕ ಮೂಲದ ಮೇಲೆ ರಚಿಸಿದವು. ಇಂದಿಗೂ ಕೂಡಾ ಚೆನ್ನಾಗಿಯೇ ಇವೆ. ಇವೆಲ್ಲ ’ಫೆಸ್ಕೊ’ ಮಾಧ್ಯಮದಲ್ಲಿ ರಚಿಸಿದವು. ಅವುಗಳಿಗೆ ಉಪಯೋಗಿಸಿದ ಬಣ್ಣಗಳೆಲ್ಲ ನೈಸರ್ಗಿಕವಾದವು. ಪ್ರಕೃತಿಯಲ್ಲೇ ಸಿಗುವ ವಿವಿಧ ಬಣ್ಣದ ಕಲ್ಲುಗಳು, ಎಲೆ, ಹೂವುಗಳನ್ನು ಉಪಯೋಗಿಸಿ ಬಣ್ಣ ತಯಾರಿಸುತ್ತಿದ್ದರು. ಇವುಗಳ ಮಿಶ್ರಣದಿಂದ ಬಣ್ಣಗಳನ್ನು ಸಂಯೋಜಿಸುತ್ತಿದ್ದರು. ಕ್ರಿ.ಶ. ೧೩ನೇ ಶತಮಾನದಲ್ಲಿ ಭಾರತಕ್ಕೆ ಆಮದಾದ ’ಪರ್ಶಿಯನ್’ ಬಣ್ಣಗಳನ್ನು ಹಲವಾರು ಕಡೆ ಉಪಯೋಗಿಸಿದೆ. ಮುಖ್ಯವಾಗಿ ಅಂದು ರಚಿಸುತ್ತಿದ್ದ ’ಶಹನಾಮ’ (ಪರ್ಶಿಯನ್ ದೇಶದ ದಂತಕಥೆಯ) ಚಿತ್ರಣಕ್ಕೆ ಈ ಬಣ್ಣಗಳನ್ನು ಉಪಯೋಗಿಸುತ್ತಿದ್ದರು. ಬಹುಶಃ ಇವೇ ಬಣ್ಣಗಳು ದಕ್ಷಿಣದ ರಾಜ್ಯಗಳಿಗೂ ಆಮದಾಗಿರಲು ಸಾಧ್ಯ. ಅನಂತರ ೧೫ನೇ ಶತಮಾನದಲ್ಲಿ ಭಾರತದಲ್ಲಿ ರಚಿತವಾದ, ಭಾರತೀಯ ಕಥಾವಸ್ತುವಿನ ಚಿತ್ರಗಳಿಗೆ ಬಹುತೇಕ ಆಮದಾದ ಬಣ್ಣಗಳನ್ನೇ ಉಪಯೋಗಿಸುತ್ತಿದ್ದರು. ಬಹುಶಃ ಕಿನ್ನಾಳ ಶೈಲಿಯಲ್ಲೂ ಇದೇ ತೆರನಾದ ಬಣ್ಣಗಳು ಉಪಯೋಗ ಆಗಿರಲೂಬಹುದು.

ಪ್ರಸ್ತುತ, ಕಿನ್ನಾಳ ಶೈಲಿಯ ಚಿತ್ರರಚನೆ ಕೂಡ ಇದೇ ವಿಧಾನಕ್ಕೆ ಸೇರುತ್ತದೆ. ಇವರು ಚಿತ್ರ ರಚಿಸುವುದು ಮರದ ಹಲಗೆ ಮೇಲೆಯಾದರೂ, ಹಂಪಿಯ ಅಥವಾ ಲೇಪಾಕ್ಷಿಯ ಅನುಕರಣಾತ್ಮಕ ಶೈಲಿಯನ್ನು ಗಮನಿಸಬಹುದು. ಅಂದರೆ ಭಿತ್ತಿಚಿತ್ರ ಶೈಲಿಯನ್ನು ಹಲಗೆ ಚಿತ್ರಕ್ಕೆ ಅಳವಡಿಸಿಕೊಳ್ಳಲಾಗಿದೆ.

ಕಿನ್ನಾಳ ಶೈಲಿಯ ಈಗಿನ ತಾಂತ್ರಿಕತೆಯ ಬಗ್ಗೆ ಇನ್ನುಮುಂದೆ ನೋಡಬಹುದಾಗಿದೆ. ಕಿನ್ನಾಳ ಚಿತ್ರಶೈಲಿ ಪ್ರಮುಖವಾಗಿ ಮರದ ಹಲಗೆಯನ್ನು ಅವಲಂಬಿಸಿದೆ. ಇದಕ್ಕೆ ಉಪಯೋಗಿಸುವ ಮರ ಕೂಡಾ ತುಂಬಾ ಹಗುರಾಗಿ ಇರಬೇಕು. ಅಂದರೆ ಎಲ್ಲೆಂದರಲ್ಲಿ ಕೊಂಡೊಯ್ಯಬಹುದು. ಇದಕ್ಕಾಗಿ ಚಿತ್ರಗಾರ ಕಲಾವಿದರು ಪೋಲಕಿ ಎಂಬ ಮರ ಇಲ್ಲವೆ ಇನ್ನಿತರ ಹಗುರಾದ ಮರವನ್ನು ಉಪಯೋಗಿಸುತ್ತಾರೆ.

ಮೊಲದನೇ ಹಂತದಲ್ಲಿ ಮರದ ಹಲಗೆಯನ್ನು ಚೆನ್ನಾಗಿ ಉಜ್ಜಿ ಅದರ ಮೈಯನ್ನು ನಯಗೊಳಿಸಬೇಕು. ಅಂದರೆ ಮರದ ಮೇಲ್ಮೈಯನ್ನು ನುಣುಪುಗೊಳಿಸಬೇಕು. ಈಗ ಮರದ ಮೇಲ್ಮೈಗೆ, ಚಿತ್ರ ರಚನೆಗೆ ಯೋಗ್ಯವಾದಂತಹ, ಮೇಲ್ಮೈಯ ಬಣ್ಣ ಹಾಕಲು ಬೇಕಾದಂತಹ, ಹಲಗೆಯ ಮೈ ತಯಾರಾದಂತಾಯಿತು. ಈ ಹಿಂದೆಯೇ ವಿವರಿಸಿರುವ ಹಾಗೆ ಚಿತ್ರಗಾರ ಕಲಾವಿದರು ಮನೆಯಲ್ಲಿ ಬಣ್ಣ ತಯಾರಿಸುತ್ತಾರೆ. ಕೆಲವು ಸಲ ಮಾರುಕಟ್ಟೆಯಲ್ಲೂ ಕೊಳ್ಳುತ್ತಾರೆ. ಮನೆಯಲ್ಲಿ ತಯಾರಿಸುವ ಪ್ರಮುಖ ಬಣ್ಣಗಳು ಹೀಗಿವೆ. ಸುಣ್ಣದ ಕಲ್ಲಿನಿಂದ ಬಿಳಿ, ಕೆಂಪು ಮಣ್ಣು, ದೀಪದ ಕಾಡಿಗೆ, ತವರದ ಲೋಹದಿಂದ ತಯಾರಿಸುವ ಬಣ್ಣಗಳು ಇತ್ಯಾದಿ. ಚಿತ್ರಗಾರರು ಉಪಯೋಗಿಸುವ ಯಾವುದೇ ಬಣ್ಣಕ್ಕೆ ಮರವಜ್ರದ ಅಂಟು ದ್ರಾವಣ ಸಾಮಾನ್ಯ ಮಿಶ್ರಣ ಮಾಧ್ಯಮವಾಗಿರುತ್ತದೆ. ಇದರಿಂದಲೇ ಬಣ್ಣಗಳನ್ನು ಬೆರೆಸುವುದು. ಇನ್ನು ಎರಡನೆಯ ಹಂತದಲ್ಲಿ ತೆಳುವಾಗಿ ಬಿಳಿಬಣ್ಣವನ್ನು ಲೇಪಿಸುವುದು. ಚಿತ್ರ ರಚಿಸಲು ಯೋಗ್ಯವಾದ ಮೇಲ್ಮೈಯನ್ನು ತಯಾರಿಸಿಕೊಳ್ಳುವುದು. ಅದು ಪೂರ್ತಿ ಒಣಗಿಸಿ ನಂತರ ಬಾಹ್ಯರೇಖಾ ಚಿತ್ರ ಬರೆದುಕೊಂಡು ಹಂತ ಹಂತವಾಗಿ ಬಣ್ಣ ತುಂಬಲು ಆರಂಭಿಸುತ್ತಾರೆ. ಬಣ್ಣ ತುಂಬುವ ಕಾರ್ಯದ ನಂತರ ಚಿತ್ರದ ಮುಖ್ಯ ಭಾಗಗಳನ್ನು ಪೂರ್ಣಗೊಳಿಸುವುದು. ಅದು ಆದಮೇಲೆ ತೆಳುವಾದ ವಾರ್ನಿಷನ್ನು ಲೇಪಿಸುತ್ತಾರೆ. ಮೊದಲೆಲ್ಲ ವಾರ್ನಿಷನ್ನು ಸಹ ಮನೆಯಲ್ಲೇ ತಯಾರಿಸುತ್ತಿದ್ದರು. ಈಗ ಮಾರುಕಟ್ಟೆಯಲ್ಲೇ ದೊರೆಯುವುದರಿಂದ ಅದನ್ನೇ ಹಾಕುತ್ತಾರೆ. ಇದನ್ನು ಹಾಕುವ ಉದ್ದೇಶ ಚಿತ್ರದ ಬಣ್ಣಗಳು ತಮ್ಮ ಹೊಳಪು ಕಳೆದುಕೊಳ್ಳದಿರಲಿ ಎಂದು ಮತ್ತು ಬಹಳ ದಿನಗಳ ವರ್ಷಗಳವರೆಗೆ ರಕ್ಷಿಸಿ ಇಡಬಹುದು ಎಂದು.

ಈ ಚಿತ್ರಗಳಿಗೆ ಬಣ್ಣ ಹಾಕುವಾಗ ಗಮನದಲ್ಲಿಡಬೇಕಾದ ಕೆಲವು ನಿರ್ದಿಷ್ಟ ಹಂತಗಳಿವೆ. ಮೊದಲು ಲೋಹದ ಬಣ್ಣ, ಅಂದರೆ ತವರದ ಲೋಹದಿಂದ ತಯಾರಿಸಿದ್ದು, ಇದರಿಂದ ಬೆಳ್ಳಿ ಬಂಗಾರದ ಆಭರಣಗಳಿಗೆ ಅಥವಾ ಇನ್ನಾವುದೇ ಇಷ್ಟವಾದ ಸ್ಥಳಗಳಿಗೆ ಹಾಕಬೇಕು. ಇದನ್ನು ಮೊದಲು ಚೆನ್ನಾಗಿ ಕುಟ್ಟಿ ಮರವಜ್ರದ ದ್ರಾವಣದೊಂದಿಗೆ ಒಂದೆರಡು ದಿನ ನೆನೆಯಲು ಇಡುತ್ತಾರೆ. ಅನಂತರ ಇದನ್ನು ಉಪಯೋಗಿಸುತ್ತಾರೆ. ಆಮೇಲೆ ಲೋಹದ ಈ ಬಣ್ಣವನ್ನು ಹಾಕಿದ ಜಾಗದ ಮೇಲೆ ಹೊಳಪು ಬರುವಂತೆ ಉಜ್ಜಬೇಕು. ಚಿನ್ನದ ಬಣ್ಣ ಬೇಕಿದ್ದರೆ ವಾರ್ನಿಷ್ ದ್ರಾವಣದಲ್ಲಿ ಕೇಸರಿ ಅಥವಾ ಚಿನ್ನದ ಹಳದಿ ಬಣ್ಣವನ್ನು ಬೆರಸಿ ಲೋಹದ ಉಜ್ಜಿದ ಸ್ಥಳಗಳ ಮೇಲೆ ಹಾಕಿದರೆ ಆ ಸ್ಥಳದಲ್ಲಿ ಚಿನ್ನದ ಹೊಳಪು ಬರುತ್ತದೆ. ಆಮೇಲೆ ಮಿಕ್ಕ ಬಣ್ಣಗಳನ್ನು ಚಿನ್ನ, ಬೆಳ್ಳಿಯ ಬಣ್ಣಗಳು ಎಲ್ಲಿ ಬೇಕೋ, ಆ ಭಾಗಗಳನ್ನು ಮಾತ್ರ ಹಾಗೇ ಉಳಿಸಿಕೊಂಡು, ಹಾಕುತ್ತಾ ಹೋಗಬೇಕು. ಚಿತ್ರ ರಚನೆ ಆದಮೇಲೆ ಚಿತ್ರದ ಒಟ್ಟಾರೆ ಆಕೃತಿಗಳ ಮೇಲೆ ಮತ್ತೊಮ್ಮೆ ವಾರ್ನಿಷ್ ಹಾಕಿದರೆ ಎಲ್ಲವೂ ಗಟ್ಟಿಯಾಗಿ ಕಿತ್ತು ಬರದಂತೆ ಮರದ ಹಲಗೆಯ ಮೇಲ್ಮೈ ಮೇಲೆ ಕುಳಿತುಕೊಳ್ಳತ್ತವೆ. ಈಗಿನ ಚಿತ್ರಗಾರ ಕಲಾವಿದರು ತಮ್ಮ ಪೂರ್ವಜರಿಂದ ಕಲಿತು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಈ ತಾಂತ್ರಿಕ ಪರಿಣತಿಯನ್ನು.
ಕಿನ್ನಾಳ ಶೈಲಿಯ ಚಿತ್ರಗಳಲ್ಲಿ ಸಾಮಾನ್ಯವಾಗಿ ಸರಳ ಹಾಗೂ ತುಂಬಾ ಸುಂದರವಾದ ವರ್ಣಗಳನ್ನು ಉಪಯೋಗಿಸಿದ್ದಾರೆ, ಉಪಯೋಗಿಸುತ್ತಲೂ ಇದ್ದಾರೆ. ಸಾಮಾನ್ಯವಾಗಿ ಕೆಂಪು, ಹಸಿರು, ಹಳದಿ, ನೀಲಿ, ಕಂದು, ಕಪ್ಪು ಇವುಗಳ ಜೊತೆಯಲ್ಲಿ ತವರದ ಲೋಹದಿಂದ ತಯಾರಿಸಿದ ಬಣ್ಣಗಳು ಈ ಎಲ್ಲಾ ಬಣ್ಣಗಳನ್ನು ನೇರವಾಗಿ ಉಪಯೋಗಿಸುವುದರಿಂದ ಬಣ್ಣಗಳ ಆಕರ್ಷಣೆ, ಚಿತ್ರದ ಆಕರ್ಷಣೆಯೂ ಹೆಚ್ಚುತ್ತದೆ. ಈ ವರ್ಣ ಸಂಯೋಜನೆ ಜೈನ ಓಲೆಗರಿ ಹಸ್ತ ಪ್ರತಿಗಳನ್ನು (ಮಹಾಪುರಾಣ) ನೆನಪಿಗೆ ತರುತ್ತದೆ.
ಈಗ ಕಿನ್ನಾಳ ಶೈಲಿಯಲ್ಲಿ ಚಿತ್ರಿಸುವ ವಿಷಯಗಳನ್ನು ಗಮನಿಸಬಹುದು. ಸಾಮಾನ್ಯವಾಗಿ ಚಿತ್ರಗಾರ ಕಲಾವಿದರು ಮೊದಲಿನಿಂದಲೂ ಪುರಾಣಗಳಿಗೆ ಸಂಬಂಧಪಟ್ಟ ವಿಷಯಗಳನ್ನೇ ಚಿತ್ರಿಸುತ್ತಾರೆ. ವೈಷ್ಣವ, ಶೈವಧರ್ಮಗಳಿಗೆ ಸಂಬಂಧಪಟ್ಟ ದೇವ ದೇವತೆಯರನ್ನು ಚಿತ್ರಿಸುತ್ತಾರೆ. ಮತ್ತು ಕಲಾತ್ಮಕ ವಿನ್ಯಾಸಗಳನ್ನು ಚಿತ್ರಿಸುತ್ತಾರೆ. ಮಹಾಭಾರತ ರಾಮಾಯಣಗಳಿಂದಾಯ್ದ, ಸ್ಕಂದ ಪುರಾಣಿಗಳಿಗೆ ಸಂಬಂಧಿಸಿದ ವಿಷಯಗಳು, ಅಷ್ಟದಿಕ್ಬಾಲಕರು, ನವಗ್ರಹಗಳು, ದೇವಿ ಪುರಾಣದಿಂದ ಆಯ್ದ ವಿಷಯಗಳು ಕೂಡಾ ಚಿತ್ರಣಗೊಳ್ಳುತ್ತವೆ. ಈ ಎಲ್ಲಾ ವಿಷಯಗಳು ಚಿತ್ರಗಾರರ ’ವಿನ್ಯಾಸದ’ ಇತಿಮಿತಿಯೊಳಗೇ ಚಿತ್ರಣಗೊಳ್ಳುತ್ತದೆ. ಹೀಗೆ ಹಲವಾರು ವಿಷಯಗಳನ್ನು ಚಿತ್ರಿಸುವುದರ ಜೊತೆಗೆ ಅಲ್ಲಿನ ಜಾನಪದದ ಸೊಬಗನ್ನು ಆ ಚಿತ್ರಗಳಲ್ಲಿ ತುಂಬುತ್ತಾರೆ. ಇದರಿಂದ ಆ ಚಿತ್ರಗಳಲ್ಲಿ ಸ್ಥಳೀಯವಾದ ಒಂದು ತೆರನಾದ ಆಕರ್ಷಣೆ ಮತ್ತು ಜೀವಕಳೆ ಬರುತ್ತದೆ.
ಶೈಲಿಯ ವಿಶ್ಲೇಷಣೆ :
ಐತಿಹಾಸಿಕವಾಗಿ ಕಿನ್ನಾಳ ಶೈಲಿಯ ಬೆಳವಣಿಗೆಯನ್ನು ನಾವು ಕ್ರಿ.ಶ. ೧೫೪೦ ರಿಂದ ಗುರುತಿಸಬಹುದು. ವಿಜಯನಗರದಲ್ಲಿ (೧೫೪೦) ಅಚ್ಯುತರಾಯನ ಕಾಲ, ಅದೇ ಸಮಯದಲ್ಲೆ ಲೇಪಾಕ್ಷಿಯ ಮಂಟಪಗಳಲ್ಲಿ ಮತ್ತು ಹಂಪೆಯ ಪಂಪಾಪತಿ ದೇವಸ್ಥಾನದಲ್ಲಿ ಚಿತ್ರಗಳನ್ನು ರಚಿಸಲಾಯಿತು. ೧೫೪೦ ರಿಂದ ಸುಮಾರು ೨೦೦ ವರ್ಷಗಳವರೆಗೆ ಯಾವುದೇ ತೆರನಾದ ಪುರಾವೆಗಳಾಗಲೀ ಕಿನ್ನಾಳ ಶೈಲಿಯ ಬಗ್ಗೆ ನಮಗೆ ಸಿಗುವುದಿಲ್ಲ. ಆದರೂ ಕೂಡಾ ಈ ಕಿನ್ನಾಳ ಕಲಾವಿದರ ಪೂರ್ವಜರು ಅಂದು ಹಂಪೆಯಲ್ಲಿ ಇದ್ದು ಇದೇ ಕೆಲಸ ಮಾಡುತ್ತಿದ್ದರು ಎಂದು ಊಹಿಸಬಹುದಾಗಿದೆ. ಈ ಶೈಲಿಯ ಉಗಮ ಕ್ರಿ.ಶ.೧೫೪೦ ಎಂದು ನಿಖರವಾಗಿ ಹೇಳಲಾಗುವುದಿಲ್ಲವಾದರೂ, ಅದರ ಮೂಲಭೂತ ಕವಲು, ಬೆಳವಣಿಗೆ ಆ ಕಾಲದಲ್ಲಿ ಆಯಿತು ಎನ್ನಬಹುದು. ಆಕಾಲದ ಭಿತ್ತಿಚಿತ್ರಗಳು ಕಿನ್ನಾಳ ಶೈಲಿಯ ಮೂಲ.

ಕ್ರಿ.ಶ. ೧೬೬೫ ರಲ್ಲಿ ವಿಜಯನಗರದ ಪತನದ ನಂತರ ಅಲ್ಲಿನ ಕಲಾವಿದರು ನಾನಾ ಭಾಗಗಳಲ್ಲಿ ವಲಸೆ ಹೋಗಬೇಕಾಯಿತು. ಕಿನ್ನಾಳ ಕಲಾವಿದರು ಇವರಲ್ಲಿಯೇ ಇದ್ದವರು. ಇನ್ನುಳಿದವರು ಹಲವಾರು ಭಾಗಗಳಿಗೆ ಹೋದರು. ಹೀಗಾಗಿ ವಿಜಯನಗರ ಶೈಲಿಯಿಂದ ಪ್ರೇರಣೆ ಪಡೆದ ಶೈಲಿಗಳೆಲ್ಲ ಅಲ್ಲಿನ ಸ್ಥಳೀಯ ಹೆಸರುಗಳಿಂದಾಗಲೀ ಅಥವಾ ಬೇರೆ ಹೆಸರಿನಿಂದ ಪ್ರಸಿದ್ದಿಯಾಗಿರಬಹುದು. ಆದರೆ ಕಿನ್ನಾಳದ ಈ ಕಲಾವಿದರು ಅಲ್ಲಿಂದ ಬಂದಮೇಲೆ ಕೊಪ್ಪಳ ನವಾಬರ, ಕಿನ್ನಾಳ ದೇಸಾಯರ ಪೋಷಣೆ ಅವರಿಗೆ ಅವರ ಚಿತ್ರ ಶೈಲಿಗೆ ದೊರೆಯಿತು. ಆದುದರಿಂದಲೇ ಈಗಲೂ ಕಿನ್ನಾಳ ಶೈಲಿ ತನ್ನತನವನ್ನು ಅಲ್ಪಸ್ವಲ್ಪವಾದರೂ ಉಳಿಸಿಕೊಂಡು ಬಂದು ಬೆಳೆಯುತ್ತಿದೆ.
ಕಿನ್ನಾಳದಲ್ಲಿ ರಚಿತವಾದ ಹಲವು ಹಳೆಯ ಚಿತ್ರಗಳು ನಾಶವಾಗಿ ಭಾಗಶಃ ಉಳಿದುಬಂದಿರುವಂಥವು ದೊರೆತಿವೆ. ಇವು ಸುಮಾರು ೧೮೦-೨೦೦ ವರ್ಷಗಳಷ್ಟು ಹಿಂದಿನವು, ಈಗ ಉಳಿದಿರುವ ರೇಖಾಚಿತ್ರಗಳ ಆಧಾರದಿಂದ, ಹಾಗೇ ಕಿನ್ನಾಳದ ಮೂಲ ಪುರುಷ ಸಂಜೀವಪ್ಪನ ಕಾಲದಲ್ಲಿ ರಚಿತವಾದ ಚಿತ್ರಗಳ ಆಧಾರದಿಂದ ಶೈಲಿಯ ಬೆಳವಣಿಗೆಯನ್ನು ಗುರುತಿಸಬಹುದು. ಈ ಚಿತ್ರಗಳಲ್ಲಿ ಇರುವ ವರ್ಣಸಂಯೋಜನೆ, ರೇಖಾವಿನ್ಯಾಸ ಎಲ್ಲವೂ ಹಂಪೆಯ ಪಂಪಾಪತಿ ದೇವಸ್ಥಾನ ಮತ್ತು ಲೇಪಾಕ್ಷಿಯ ಕಲ್ಯಾಣ ಮಂಟಪದ ಭಿತ್ತಿ ಚಿತ್ರಗಳಿಗೆ ತೀರ ಹತ್ತಿರವಾದುದು ಎನಿಸುತ್ತದೆ. ಕಿನ್ನಾಳ ಶೈಲಿ ವಿಜಯನಗರ ಶೈಲಿಯ ಅನಂತರದ ಬೆಳವಣಿಗೆ ಎಂಬುದು ಸ್ಪಷ್ಟವಾಗುತ್ತದೆ.

ವಿಜಯನಗರದ ಶೈಲಿಯಿಂದ ಬೆಳೆದು ಬಂದ ಕಿನ್ನಾಳ ಶೈಲಿ ಆರಂಭದಲ್ಲಿ ಉತ್ತಮ ಮಟ್ಟದ ಬೆಳವಣಿಗೆಯನ್ನು ಹೊಂದಿದರೂ, ನಂತರದಲ್ಲಿ ಹಲವಾರು ತೊಂದರೆಗಳಿಂದ ಅದರ ಬೆಳವಣಿಗೆ ಕುಂಠಿತವಾಯಿತು. ಅದು ಅವರ ಅಂದಿನ ಸ್ಥಿತಿಗತಿಗಳ ಮೇಲೆ ಬೆಳೆದು ಬಂದುದಾಗಿತ್ತು. ಆದರೆ ಇದನ್ನು ತೀವ್ರತರವಾದ ಒಂದು ಹಂತವೆಂದು ಭಾವಿಸಿ, ವಿವರವಾಗಿ ಅಭ್ಯಾಸ ಮಾಡಿದಾಗ ಕೆಲವು ಐತಿಹಾಸಿಕ ಅಂಶಗಳು ಹೊರಬರುತ್ತವೆ. ಇಲ್ಲಿ ಐತಿಹಾಸಿಕ ಬೆಳವಣಿಗೆಯ ಹಂತಗಳನ್ನು ಗುರುತಿಸಿ, ಇತರ ಶೈಲಿಗಳೊಂದಿಗೆ ಇರಬಹುದಾದ ಹೋಲಿಕೆಯನ್ನು ಅಭ್ಯಸಿಸಲು ಪ್ರಯತ್ನಿಸಲಾಗಿದೆ. ಮತ್ತು ಈ ಶೈಲಿಯ ಬದಲಾವಣೆ ಸಮಾಜದ ಅಭಿರುಚಿಯೊಂದಿಗೆ ರಾಜಿ ಮಾಡಿಕೊಂಡು, ತನ್ನದೇ ಆದ ಹೊಸ ಶೈಲಿಯನ್ನು ರೂಪಿಸುವಲ್ಲಿ ಆದ ಬದಲಾವಣೆಯನ್ನು ಗಮನಿಸಿದೆ.
ಪಲ್ಲವರು ಅವರ ನಂತರ ಚೋಳರ ಪರಂಪರೆಯಿಂದ ಬಂದ ಶೈಲಿಯೇ ವಿಜಯನಗರ ಶೈಲಿಯೆಂಬುದು ನಿಜ. ವಿಜಯನಗರದ ಶೈಲಿಯ ಒಂದು ಬೆಳವಣಿಗೆ ಕಿನ್ನಾಳ ಶೈಲಿ. ಐತಿಹಾಸಿಕ ವಿಜಯನಗರದ ಚಿತ್ರಶೈಲಿ ಚೋಳ ಶಿಲ್ಪದ ರೂಪರೇಷೆಗಳು ಹಾಗೂ ಸ್ಥಳೀಯವಾದ ಚಿತ್ರಶೈಲಿಯ ವೈಶಿಷ್ಟ್ಯಗಳಿಂದ ಬೆಳವಣಿಗೆ ಹೊಂದಿದುದಾಗಿದೆ. ಅನಂತರ ಮಧುರೆ ನಾಯಕರ ದೇವಸ್ಥಾನಗಳ ವಾಸ್ತುವಿನ ಅಂಶಗಳನ್ನು ಮೈಗೂಡಿಸಿಕೊಂಡು ಪರಿಪೂರ್ಣ ಸ್ವತಂತ್ರ್ಯ ಸ್ವರೂಪವನ್ನು ವಿಜಯನಗರ ಶೈಲಿ ಪಡೆಯಿತು. ಕಿನ್ನಾಳ ಶೈಲಿ ವಿಜಯನಗರದ ಹದ್ದಿನಲ್ಲಿ ಬೆಳವಣಿಗೆ ಹೊಂದ ಕಾರಣ ಅಲ್ಲಿನ ಹಲವು ಅಂಶಗಳು ಇದರಲ್ಲೂ ಕಾಣರುತ್ತವೆ.
ಇಲ್ಲಿ ಕಿನ್ನಾಳ ಶೈಲಿ ೧೬೦೦ ರಿಂದ ೧೮೦೦ ರ ಮಧ್ಯೆ ಬೆಳೆದು ಉತ್ತಮ ಸ್ಥಿತಿಯನ್ನು ಹೊಂದಿತೆಂದು ನಿರ್ಧರಿಸಬಹುದು. ೧೮೦೦ ರ ನಂತರ ಹಲವಾರು ಬದಲಾವಣೆಗಳನ್ನು ಹೊಂದಿ ಬೆಳೆಯಿತು. ೧೫೦೦ ರಿಂದ ೧೫೪೦ ರ ಅವಧಿಯಲ್ಲಿ ಪಂಪಾಪತಿ ಲೇಪಾಕ್ಷಿ ಭಿತ್ತಿ ಚಿತ್ರಗಳು ನಿರ್ಮಿತವಾದುವು. ಆ ಭಿತ್ತಿ ಚಿತ್ರಗಳ ತದ್ರೂಪ ಬೆಳೆದು ಬಂದದ್ದು ಎಂದಾಯಿತು. ಕಿನ್ನಾಳ ಶೈಲಿಯಲ್ಲಿ ಕಾಣಬರುತ್ತವೆ. ಹೀಗಾಗಿ ಕಿನ್ನಾಳ ಶೈಲಿ ವಿಜಯನಗರದಿಂದ ಬೆಳೆದು ಬಂದದ್ದು ಎಂದಾಯಿತು. ಕಿನ್ನಾಳ ಶೈಲಿ ಶಕ್ತ ಅಭಿವ್ಯಕ್ತಿ ಶೈಲಿಯಾಗಿ ಬೆಳೆಯಲಿಲ್ಲ. ಕೇವಲ ಆಲಂಕಾರಿಕ, ಸಾಂಪ್ರದಾಯಿಕ ಶೈಲಿಯಾಯಿತು. ಇನ್ನೂ ಹಿಂದೆ ಇದ್ದಿರಬಹುದಾದ ಅದರ ವಿನ್ಯಾಸ ಇತ್ಯಾದಿಗಳ ಅಂಶಗಳು ಉಳಿದಿದ್ದರೂ ಅಷ್ಟು ಪ್ರಭಲವಾಗಿ ಕಾಣುವುದಿಲ್ಲ. ವಿಶಿಷ್ಟವಾಗಿ ಬೆಳೆದ ಹಲವಾರು ಇತರ ಶೈಲಿಗಳು ಕಾಣಸಿಗುತ್ತವೆ. ವಿಜಯನಗರದ್ದೇ ಬಂದಿದೆ. ಬಹುಶಃ ಈ ಶೈಲಿಗಳಿಗೆ ಯಾವಾಗಲೂ ದೊರೆತ ರಾಜಾಶ್ರಾಯವು ಇದಕ್ಕೆ ಕಾರಣವಿರಬೇಕು. ಕಿನ್ನಾಳ ಕಲಾವಿದರು ತಮ್ಮ ಬದುಕಿನ ಮಾರ್ಗಕ್ಕೆ ತಮ್ಮ ಶೈಲಿಯನ್ನು ಕಲೆಯನ್ನು ಉಳಿಸಿಕೊಂಡರು.

೧೮೦೦ ರ ನಂತರ ಆರಂಭ ಬ್ರಿಟಿಷ್ ಅಕಾಡೆಮಿಕ್ ಅಭ್ಯಾಸ ಈ ಕಿನ್ನಾಳ ಕಲಾವಿದರುಗಳಿಗೆ ಇರಲಿಲ್ಲ. ಅಲ್ಲದೇ ಮೈಸೂರು, ತಂಜಾವೂರುಗಳಂತೆ ಶೈಲಿಯ ಅಭ್ಯಾಸದ ಶಾಲೆಗಳಿರಲಿಲ್ಲ. ಮತ್ತು ಅಂದಿನ ಪಟ್ಟಣಗಳ ಸಂಪರ್ಕವೂ ತೀರಾ ಕಡಿಮೆ ಆಗಿತ್ತು. ಹೀಗಾಗಿ ಇದು ತನ್ನ ನೆಲದ ಗುಣಗಳನ್ನು ಉಳಿಸಿಕೊಂಡು ಬೆಳೆಯಿತು. ಆದರೂ ಕೂಡ ಕಿನ್ನಾಳದ ಶೈಲಿಯ ರೇಖಾ ವಿನ್ಯಾಸವನ್ನು ಅಂದಿನ ಕಾಲದ ತಂಹಾವೂರು ಮೈಸೂರು ಶೈಲಿಗಳ ಹೋಲಿಸಬಹುದು. ಇಲ್ಲೂ ಸಹ ಅವುಗಳ ತರಹವೇ ಇರುವ ಲಕ್ಷಣಗಳು ಕಂಡುಬರುತ್ತವೆ. ಇದೇ ಸಮಯದಲ್ಲಿ ಚಿತ್ರಗಾರ ಕಲಾವಿದರು ಈ ಶೈಲಿ ವಿಜಯನಗರದಿಂದ ಬೆಳೆದಿದ್ದು ಎಂಬುದನ್ನು ಮರೆತಂತೆ ತೋರುತ್ತದೆ. ಇಲ್ಲಿ ಅವರಿಗಿದ್ದ ಸಮಸ್ಯೆ ಬದುಕಿನದು. ಹೀಗಾಗಿ ಅದರ ಮೂಲರೂಪ ಅಥವಾ ಪಾರಂಪರಿಕ, ಸಾಂಪ್ರದಾಯಕ ಶೈಲಿಯ ಬಗ್ಗೆ ಗಮನ ಕೊಡದೇ ಬೆಳೆಸಿದರು. ಇದೊಂದು ದೊಡ್ಡ ಪ್ರಶ್ನೆ ಎಂದು ಅವರಿಗೆ ಅನ್ನಿಸಿಯೇ ಇರಲಿಲ್ಲ. ಏಕೆಂದರೆ, ಮೊದಲೇ ಸಿದ್ದವಾಗಿದ್ದ ರೀತಿ ರಿವಾಜುಗಳು, ತಾಂತ್ರಿಕ ತಿಳುವಳಿಕೆ ಇದ್ದುದರಿಂದ ಹಿಂದೆಯೇ ಚಿತ್ರಿಸಿದ ವಿಷಯಗಳ ಕೈಗೆ ಸಿಗುತ್ತಿದ್ದುದರಿಂದ ಹೆಚ್ಚಿನದನ್ನು ಹುಡುಕುವ ವಿಚಾರ ಮಾಡದೇ ಅದನ್ನೇ ಪುನರ್ ರಚಿಸುತ್ತ ಮುಂದುವರಿಸಿದರು.
ಇಂದಿನ ಬದಲಾಗುತ್ತಿರುವ ಜನರ ಅಭಿರುಚಿ, ಹವ್ಯಾಸ ಹಾಗೂ ಇಷ್ಟಾನುಸಾರ, ಚಿತ್ರಗಾರ ಕಲೆ ಕೂಡ ಹಲವು ಮಾದರಿಯ ಶೈಲಿಗಳಿಗೆ ಒಗ್ಗಿಹೋಗಿದೆ. ಎಲ್ಲಾ ವಿಧದ ಹಂತಗಳಲ್ಲೂ ಈ ಬದಲಾವಣೆಯನ್ನು ಕಾಣಬಹುದು. ಅವರ ಅಂದಿನ ರೇಖಾವಿನ್ಯಾಸ, ಇಂದಿನ ರೇಖಾ ವಿನ್ಯಾಸದ ಮಧ್ಯೆ ಸಂಬಂಧವೇ ಇಲ್ಲ ಎಂಬಂತೆ ಇದೆ. ಆದರೂ ಕೆಲವೇ ಜನ ಇಂದಿನ ಕಲಾವಿದರುಗಳಲ್ಲಿ ಶೀನಪ್ಪನ ಹಿರಿಯ ಮಗ ಕೃಷ್ಣಮೂರ್ತಿ ಎಂಬುವವರು ಮತ್ತು ನಾಲ್ಕನೇ ಮಗ ನಾರಾಯಣಪ್ಪ ಎಂಬುವರು ಅಂದಿನ ಹಲವು ಅಂಶಗಳನ್ನು, ವರ್ಣ ಸಂಯೋಜನೆಯನ್ನು ಮತ್ತು ತಾಂತ್ರಿಕತೆಯನ್ನು ಉಳಿಸಿಕೊಂಡು ಚಿತ್ರಿಸುತ್ತಾರೆ. ಉಳಿದವರು ಬೊಂಬೆಗಳನ್ನು ಆಟಿಕೆಗಳನ್ನು ಮತ್ತು ಫಲಪುಷ್ಪ ಇತ್ಯಾದಿ ವ್ಯಾಪಾರೀ ವಸ್ತುಗಳನ್ನು ಮಾಡುತ್ತಾರೆ.
ಕಿನ್ನಾಳ ಶೈಲಿ ಇದೆ ಎಂದು ಎಷ್ಟೋ ಜನರಿಗೆ ಗೊತ್ತಿಲ್ಲದಿರುವುದು ಒಂದು ದುಃಖಕರ ಸಂಗತಿ. ೧೯೬೨ ರಲ್ಲಿ ದಿವಂಗತ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಕಿನ್ನಾಳಕ್ಕೆ ಭೇಟಿ ನೀಡಿ, ಅಲ್ಲಿನ ಕುಶಲಕಲೆಯನ್ನು ನೋಡಿ, ಭಾರತ ಕರಕುಶಲ ವಿಭಾಗದಲ್ಲಿ ಒಂದು ಉನ್ನತ ಸ್ಥಾನ ಕಲ್ಪಿಸುವಲ್ಲಿ ಸಹಾಯ ಮಾಡಿದರು. ನಂತರ ಕರ್ನಾಟಕ ಲಲಿತಕಲಾ ಅಕಾಡೆಮಿ ಇತ್ತೀಚೆಗೆ ಕಾರ್ಯಾಗಾರ ಮಾಡಿ ಈ ಶೈಲಿಯ ತಾಂತ್ರಿಕ ಬೆಳವಣಿಗೆ ಅಭ್ಯಾಸ ಮಾಡಲು ಸಹಾಯ ಮಾಡಿದೆ. ಆದರೂ ಇದು ಎಲ್ಲರಿಗೂ ತಿಳಿದು ಇದಕ್ಕೊಂದು ಸ್ಥಾನ ಕಲ್ಪಿಸುವುದರ ಜೊತೆಗೆ ಈ ಶೈಲಿಯ ಸಾಂಪ್ರದಾಯಿಕ ಅಭ್ಯಾಸ ಆಗಬೇಕು. ಅಂದಾಗ ಮಾತ್ರ ಇದು ಉಳಿದು ಬೆಳೆದು ಬರಲು ಸಾಧ್ಯ. ಇದರ ಜೊತೆಯಲ್ಲಿ ಐತಿಹಾಸಿಕವಾಗಿ ಇದರ ಅಭ್ಯಾಸ, ವಿಮರ್ಶೆಯೂ ಅಷ್ಟೇ ಅಗತ್ಯವಾಗಿದೆ. ಅಂದರೆ ಇದರ ಜೊತೆಗೆ ಅಂದು ಇದ್ದ ಹಲವಾರು ಶೈಲಿಗಳ ಜೊತೆಗೆ ಇದಕ್ಕೆ ಇದ್ದಿರಬಹುದಾದ ಸಾದೃಶ್ಯ ಸಂಬಂಧ ಪ್ರೇರಣೆಯ ಅಂಶಗಳು ಮತ್ತು ಜಾನಪದ ಹೋಲಿಕೆಗಳು ತಿಳಿಯುವಂತಾಗುತ್ತದೆ.


Advertisement

0 comments:

Post a Comment

 
Top