PLEASE LOGIN TO KANNADANET.COM FOR REGULAR NEWS-UPDATES


ಸಮಸ್ತ ಸಹೃದಯ ಕನ್ನಡ ಬಂಧು ಭಗಿನಿಯರೆ, ನಮಸ್ಕಾರ.
ಒಂದು ಘೋಷಣೆಯಿಂದ ನನ್ನ ಈ ಅಧ್ಯಕ್ಷ ಭಾಷಣವನ್ನು ಆರಂಭಿಸಬಯಸುತ್ತೇನೆ. ಆದರೆ ಇದು ನಮ್ಮ ನಿಮ್ಮ ಪಾಲಿಗೆ ಆರಂಭಶೂರತ್ವ ಆಗಬೇಕಿಲ್ಲ. ಕನ್ನಡನಾಡಿನಲ್ಲಿ ಕನ್ನಡವೇ ಸರ್ವಸ್ವ, ಸಾರ್ವಭೌಮ ಮತ್ತು ಭೂಮ; ಉಳಿದದ್ದೆಲ್ಲ ಅಲ್ಪ ಅಥವಾ ಅಗಣ್ಯ. 'ನಾಲ್ಪೇ ಸುಖಮಸ್ತಿ ಭೂಮೈವ ತತ್ಸುಖಂ'. ಆರು ಕೋಟಿ ಕನ್ನಡಿಗರ ಬದುಕು ಸುಖಮಯವಾಗುವುದು ಹೇಗೆ, ಸರ್ವೋದಯ ಸಿದ್ಧಿಸುವುದು ಹೇಗೆ ಎಂಬುದನ್ನು ಆಲೋಚಿಸಬೇಕಾಗಿದೆ. ಆಲೋಚನೆ ಆಚರಣೆಯಾಗಿ, ಆಯೋಜನೆಯಾಗಿ ಪರಿಣಮಿಸಬೇಕಾಗಿದೆ. ರಾಜ್ಯೋತ್ಸವ ಮಾಸದ ಬೆನ್ನಿನಲ್ಲೆ ಈ ಸಮ್ಮೇಳನ ಬಂದಿದೆ. ಕನ್ನಡಿಗರು ‘ನವೆಂಬರ್ ಕನ್ನಡಿಗ’ರಾಗದೆ ನಿತ್ಯ ಕನ್ನಡಿಗರಾಗಬೇಕು; ಕನ್ನಡ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಬೇಕು; ವೃತ್ತಿ, ಪ್ರವೃತ್ತಿಗಳೆಲ್ಲ ಕನ್ನಡಮಯವಾಗಬೇಕು. ಉತ್ಸಾಹ ಕ್ಷಣಿಕವಾಗಬಾರದು.
ಕನ್ನಡ ಎಂಬುದು ಒಂದು ಭಾಷೆಯ ಹೆಸರು ಮಾತ್ರವಲ್ಲ; ಅದೊಂದು ಸಾಹಿತ್ಯದ ಹೆಸರು, ಸಂಸ್ಕೃತಿಯ ಹೆಸರು, ಜನಾಂಗದ ಮತ್ತು ಜನಜೀವನದ ಹೆಸರು ಎಂಬ ವಿಶಾಲಾರ್ಥದಲ್ಲಿ ನಾವು ಪರಿಚಿಂತಿಸಬೇಕಾಗಿದೆ. ಎಲ್ಲಕ್ಕಿಂತ ಬದುಕು ದೊಡ್ಡದು; ಆದರೆ ಅದರ ಉನ್ನತಿಗೆ ಭಾಷೆ, ಸಾಹಿತ್ಯಗಳ ಕೊಡುಗೆ ಸಣ್ಣದಲ್ಲ.
ನಾನು ದೂರದ ದಕ್ಷಿಣದ ಮೈಸೂರಿನಿಂದ ಈ ಉತ್ತರದ ಹೈದರಾಬಾದು ಕರ್ನಾಟಕದ ಗಂಗಾವತಿಗೆ ಬಂದು ಪ್ರಕೃತ ಸಾಹಿತ್ಯ ಸಮ್ಮೇಳನದ ಸಾರಥ್ಯ ವಹಿಸಿರುವುದು ಅರ್ಥಪೂರ್ಣವೆಂದು ಭಾವಿಸುತ್ತೇನೆ : ಐಕ್ಯ, ಭಾವೈಕ್ಯಗಳ ದ್ಯೋತಕವಿದು. ಆದರೆ ನಾನು ಪಾರ್ಥಸಾರಥಿಯಲ್ಲ ಎಂಬ ಅರಿವು ನನಗಿದೆ.
ಕೊಪ್ಪಳ ಜಿಲ್ಲೆಯ ಒಂದು ಅಂಗ, ಈ ಗಂಗಾವತಿ. ಇದು ಬತ್ತದ ಕಣಜವೆಂದೆ ಖ್ಯಾತವಾಗಿದೆ. ಇಲ್ಲಿನ ಅಕ್ಕಿ ಅತ್ಯುತ್ತಮವಾದುದು; ಅದಕ್ಕೆ ಸಕ್ಕರೆಯ ಲೇಪ ಬೇರೆ. ಕೊಪಣ, ಕುಪಣ, ಮಹಾಕೊಪಣನಗರ ಇತ್ಯಾದಿಯಾಗಿ ಅದು ಹಿಂದೆ ಉಲ್ಲೇಖಗೊಂಡಿದೆ. ಅದು ಕನ್ನಡ ಭಾಷೆ, ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಪ್ರಾತಃಸ್ಮರಣೀಯವಾದ ಜೈನ ಧರ್ಮದ ಒಂದು ಪ್ರಸಿದ್ಧ ಕ್ಷೇತ್ರವಾಗಿತ್ತು. ಅತ್ತಿಮಬ್ಬೆಯನ್ನು ಕುರಿತ ರನ್ನ ಕವಿಯ ಈ ಪದ್ಯ ಅಗತ್ಯವಾಗಿ ನೆನೆಯಬೇಕಾದುದು :
        ಬಿಳಿಯರಳೆಯಂತೆ ಗಂಗಾ
         ಜಳದಂತೆಸೆವ ಜಿನಸೇನ ಮುನಿಪತಿಯ ಗುಣಾ
         ವಳಿಯಂತೆ ನೆಗಳ್ದ ಕೊಪಣಾ
         ಚಳದಂತೆ ಪವಿತ್ರಮತ್ತಿಮಬ್ಬೆಯ ಚರಿತಂ
         ಕನ್ನಡಿಗರ ವ್ಯಕ್ತಿತ್ವ ಮತ್ತು ಚಾರಿತ್ರ್ಯ ಕೊಪಣಗಿರಿಯಂತೆ ಪವಿತ್ರವಾಗಬೇಕು; ಎತ್ತರವಾಗಬೇಕು!
ಇದುವರೆಗೆ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದ ಹಾಗೂ ಕನ್ನಡಕ್ಕಾಗಿ ಅತಿಶಯವಾಗಿ ದುಡಿದ ಮತ್ತು ದುಡಿಯುತ್ತಿರುವ ಎಲ್ಲ ಸಾರಸ್ವತ ಧೀಮಂತ ಶ್ರೀಮಂತರ ಆಶೀರ್ವಾದದಿಂದ ನನಗೆ ಈ ಗಣ್ಯ ಗೌರವ ಪ್ರಾಪ್ತವಾಗಿದೆ ಎಂದು ನಂಬಿದ್ದೇನೆ. ಆ ಎಲ್ಲ ಹಿರಿಯರ ಮುಂದೆ ನಾನು ವಯಸ್ಸಿನಲ್ಲಿ ಅಲ್ಲದಿದ್ದರೂ ಯೋಗ್ಯತೆಯಲ್ಲಿ ಚಿಕ್ಕವನು; 'ಎನಗಿಂತ ಕಿರಿಯರಿಲ್ಲ'. ಆ ಪಾವನಪಂಕ್ತಿಗೆ, ಕನ್ನಡ ಜನಕೋಟಿಗೆ, ಅದನ್ನು ಪ್ರತಿನಿಧಿಸುವ, ಜನಸಾಮಾನ್ಯರ ವಿಶ್ವವಿದ್ಯಾನಿಲಯವಾಗಿ ಬೆಳೆದುಬಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ನನ್ನ ಹಾರ್ದಿಕ ಧನ್ಯವಾದಗಳು.
ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳು ಎಂದು ಅನೇಕರು ಟೀಕಿಸುವುದುಂಟು; ಟೀಕೆಯನ್ನು ಅಲ್ಲಗಳೆಯಬೇಕಿಲ್ಲ. ಆದರೆ ಜಾತ್ರೆಗಳಿಂದ, ಅಷ್ಟೇ ಅಲ್ಲ, ಸಂತೆಗಳಿಂದ ಕೂಡ ಪ್ರಯೋಜನಗಳುಂಟು ಎಂಬುದನ್ನು ಮರೆಯದಿರೋಣ. ಜಾತ್ರೆ ಎಂಬುದು ‘ಯಾತ್ರೆ’ಯ, ‘ಸಂತೆ’ ಎಂಬುದು ‘ಸಂಸ್ಥೆ’ಯ ತದ್ಭವಗಳಷ್ಟೆ. ಬದುಕು ಅಸತ್ತಿನಿಂದ ಸತ್ತಿನೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ಅನಂತ ಯಾತ್ರೆಯಾಗಬೇಕು. ನಾವು ಪ್ರತಿವರ್ಷ ಒಂದು ಕಡೆ ಸೇರುವುದು, ಒಬ್ಬರ ಮುಖವನ್ನೊಬ್ಬರು ನೋಡುವುದು, ಪರಸ್ಪರ ಮಾತಾಡುವುದು, ಒಟ್ಟಿಗೆ ಉಣ್ಣುವುದು, ಭಿನ್ನಾಭಿಪ್ರಾಯಗಳನ್ನಿಟ್ಟುಕೊಂಡೂ ಬೆರೆಯುವುದು ಸಾಮಾನ್ಯ ಲಾಭವಲ್ಲ. ‘ಸಿನಿಕ’ತನ ಬೇಡ; ಸಕಾರಾತ್ಮಕವಾಗಿ ಆಲೋಚಿಸೋಣ. ಸಾಹಿತ್ಯ ಎನ್ನುವುದು ಜಾತ್ರೆಯ ನಡುವೆ ಹುಟ್ಟುವುದಿಲ್ಲ, ಅದು ಏಕಾಂತ ಸ್ವಗತ ಪ್ರಕ್ರಿಯೆ ಎಂಬುದೂ ದಿಟ.
ನನ್ನ ಈ ಅಧ್ಯಕ್ಷ ಭಾಷಣದಲ್ಲಿ, ಹಿಂದಿನವರು ಹೇಳಿರದ ಹೊಸತೇನನ್ನೂ ಬಹುಶಃ ನಾನು ಹೇಳುತ್ತಿಲ್ಲ; ಹೇಳುವುದು ಸಾಧ್ಯವೂ ಇಲ್ಲ. ಇದು ಬಹುತೇಕ ಚರ್ವಿತಚರ್ವಣವಾಗುವುದು ಅನಿವಾರ‍್ಯ; ಆದರೆ ಅನುಚಿತವೇನಲ್ಲ! ಹಿಂದಿನ ಸಮ್ಮೇಳನಗಳಲ್ಲಿ ಕೈಕೊಂಡ ಅಥವಾ ಬಾಯ್ಕೊಂಡ ನಿರ್ಣಯಗಳೆಲ್ಲ ಅನುಷ್ಠಾನಗೊಂಡಿಲ್ಲ ಎಂಬ ವಿಷಾದನೀಯ ಸತ್ಯವನ್ನು ಸ್ಮರಿಸಬೇಕಾಗಿದೆ. ಹಾಗೆ ಅನುಷ್ಠಾನಗೊಂಡಿದ್ದರೆ, ಇಷ್ಟರಲ್ಲಿ ಕರ್ನಾಟಕ ಭೂತಲ ಸ್ವರ್ಗವಾಗಬಹುದಿತ್ತು! ಸಮ್ಮೇಳನಾಧ್ಯಕ್ಷ ಭಾಷಣವೂ ಪರೋಕ್ಷವಾಗಿ ನಿರ್ಣಯಗಳ ಸರಣಿಯೇ ಆಗಿರುತ್ತದಲ್ಲವೆ? ಇದೆಲ್ಲ ಕಾರ‍್ಯರೂಪಕ್ಕೆ ಬರುತ್ತದೆ ಎಂಬ ಭರವಸೆಯಾಗಲಿ ಆಶಾವಾದವಾಗಲಿ ನನಗಿಲ್ಲ. ಆದರೆ ನಿರಾಶೆಯೂ ಅನಗತ್ಯ. ಆಶೆ, ನಿರಾಶೆಗಳ ಹಾಸುಹೊಕ್ಕು, ಬದುಕು!
ಕನ್ನಡ ಸಾಹಿತ್ಯ ಸಮ್ಮೇಳನ ಎನ್ನುವಲ್ಲಿ ‘ಕನ್ನಡ ಸಾಹಿತ್ಯ’ ಎಂಬುದನ್ನು ಈ ಹೊತ್ತು ಏಕಶಬ್ದವಾಗಿ ಗ್ರಹಿಸದೆ, ಕನ್ನಡ, ಸಾಹಿತ್ಯ ಎಂದು ಬಿಡಿಸಿ ಪರಿಭಾವಿಸುವುದು ಯುಕ್ತವೆನಿಸುತ್ತದೆ. ಇದುವರೆಗೆ ‘ಸಾಹಿತ್ಯ’ದ ಮೇಲೆ ಒತ್ತು ಹಾಕುತ್ತ ಬಂದಿದ್ದೇವೆ; ಈಗ ‘ಕನ್ನಡ’ದ ಮೇಲೆ ಒತ್ತು ಹಾಕಬೇಕಾಗಿದೆ. ಭಾಷೆಯಿಲ್ಲದೆ ಸಾಹಿತ್ಯವೆಲ್ಲಿ? ಕನ್ನಡವನ್ನು ಗಟ್ಟಿಗೊಳಿಸಿ ಕಟ್ಟುವ, ತನ್ಮೂಲಕ ಸಮಷ್ಟಿ ಜೀವನವನ್ನು ಕಟ್ಟುವ ಕೆಲಸ ಇನ್ನು ಮುಂದೆ ಹಿಂದೆಂದಿಗಿಂತ ಮಿಗಿಲಾಗಿ ನಡೆಯಬೇಕಿದೆ. ಈ ದೃಷ್ಟಿಯಿಂದ ‘ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ‘ಕನ್ನಡ ಸಮ್ಮೇಳನ’ ಎಂದಷ್ಟೇ ಕರೆದರೆ ಸಾಕೆನಿಸುತ್ತದೆ!
ಭಗವಾನ್ ಬುದ್ಧ ‘ಪ್ರಜ್ಞೆ’, ‘ಅಪ್ರಮಾದ’ ಎಂಬ ಮಾತುಗಳನ್ನು ಮೇಲಿಂದ ಮೇಲೆ ಆಡುತ್ತಾನೆ. ನಾವು ಪ್ರಮಾದವಶರಾಗದೆ, ಪ್ರಜ್ಞಾಶಾಲಿಗಳಾಗಬೇಕು. ಆ ಪ್ರಜ್ಞೆ ಮುಖ್ಯವಾಗಿ ಕನ್ನಡದ ಪ್ರಜ್ಞೆಯೂ ಹೌದು. ಪ್ರಶ್ನೆಗಳೂ ಇರುತ್ತವೆ, ಇರಲಿ. ಕನ್ನಡ ನಮ್ಮ ಒಟ್ಟು ಬಾಳನ್ನು ತುಂಬಿಕೊಳ್ಳಬೇಕು; ತುಂಬಿ ತುಳುಕಬೇಕು. ಬರಿಯ ಥಳುಕು ಬೇಡ!
ಇಂದು ದೇಶ ಕಾಶ್ಮೀರದಿಂದ ಕನ್ಯಾಕುಮಾರಿಯತನಕ ಭ್ರಷ್ಟಾಚಾರ ಭೂಯಿಷ್ಠವಾಗಿದೆ; ಕರ್ನಾಟಕ ಹೇಗೆ ಅಪವಾದವಾದೀತು? ಅದಕ್ಕೆ ಪ್ರಥಮ ಸ್ಥಾನ ಎಂಬ ಪ್ರಶಂಸೆ ಬೇರೆ. ಆದರೆ ಭ್ರಷ್ಟಾಚಾರ ಕೇವಲ ಆರ್ಥಿಕ ಸ್ವರೂಪದ್ದಲ್ಲ; ಮಾಲಿನ್ಯ ಹೊರಗಿನದು ಮಾತ್ರವಲ್ಲ. ಅದು ಸ್ಥೂಲವೂ ಹೌದು, ಸೂಕ್ಷ್ಮವೂ ಹೌದು. 'ಬಿತ್ತಿ ಬೆಳೆವಂತಕ್ಕುಂ ವಿಷೋದ್ಯಾನಮಂ' ಎಂದು ನಾಗಚಂದ್ರ ಕವಿ ಉದ್ಗರಿಸಿದ. ಇಂದು ಎಲ್ಲೆಡೆ ‘ವಿಷೋದ್ಯಾನ’ಗಳ ವಿಜೃಂಭಣೆ. ಅವುಗಳನ್ನು ನಿವಾರಿಸಿ, ಅಮೃತೋದ್ಯಾನಗಳನ್ನು ಬೆಳೆಯಬೇಕು. ವಿಷವೃಕ್ಷಗಳನ್ನು, ವಿಷವೃತ್ತಗಳನ್ನು ಕತ್ತರಿಸಿ, ಅಮೃತಫಲಗಳನ್ನು ಪಡೆಯಬೇಕು. ಈ ದಿಶೆಯಲ್ಲಿ ಪ್ರವೃತ್ತವಾಗಬೇಕು, ಸಾಹಿತ್ಯ. ಕಾವ್ಯವನ್ನು ಕೇಳಿ 'ಜನ ಬದುಕಬೇಕು!' ಎಂಬುದು ಕವಿ ರಾಘವಾಂಕನ ಆಶಯ. 
ಯಾರು ಏನೇ ಹೇಳಲಂತೆ, ಕನ್ನಡ ಇಂದು ಕ್ರಮೇಣ ಕರಗುತ್ತಿದೆ, ಅಳಿವಿನ ಅಂಚಿನಲ್ಲಿಲ್ಲದಿದ್ದರೂ ನಿಶ್ಚಿತವಾಗಿ ಅಪಾಯದ ಹಾದಿಯಲ್ಲಿದೆ. ಈಗಾಗಲೆ ಜಗತ್ತಿನ ಎಷ್ಟೋ ಭಾಷೆಗಳು ಅಳಿದುಹೋಗಿವೆಯೆಂದು ತಿಳಿದುಬಂದಿದೆ. ಬಳಕೆ ತಪ್ಪುವುದರಿಂದ ಒಂದು ಭಾಷೆಯ ನಾಶ ಎಂದರೆ ಒಂದು ಸಂಸ್ಕೃತಿಯ ನಾಶ ಎಂದೇ ಅರ್ಥ. 'ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರಾ!' ಎಂದು ಕುವೆಂಪು ದಶಕಗಳ ಹಿಂದೆಯೆ ಎಚ್ಚರಿಸಿದರು. 'ಅಳುಕದೀ ಕನ್ನಡಂ, ಅಳಿಯದೀ ಕನ್ನಡಂ, ಉಳಿವುದೀ ಕನ್ನಡಂ' ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು; ಆದರೆ ಅದು ಇನ್ನೂ ಹಿಂದೆ. ಏನೇ ಇರಲಿ, ಕನ್ನಡವನ್ನು ನಾವು ಉಳಿಸಿಕೊಳ್ಳಬೇಕಿದೆ; ಬೆಳೆಸಬೇಕಿದೆ. 'ಧರ್ಮೋ ರಕ್ಷತಿ ರಕ್ಷಿತಃ' (ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ.) ಅಂತೆಯೆ, ಕನ್ನಡವನ್ನು ಕಾಪಾಡಿದರೆ ಕನ್ನಡ ನಮ್ಮನ್ನು ಕಾಪಾಡುತ್ತದೆ. 'ಸ್ವಧರ್ಮೋ ನಿಧನಂ ಶ್ರೇಯಃ' ಎಂಬುದು ಭಗವದ್ಗೀತೆಯ ಉಕ್ತಿ. ಕನ್ನಡ ನಮ್ಮ ಧರ್ಮ; ಸ್ವಧರ್ಮ. ಕನ್ನಡದಲ್ಲೇ ನಾವು ಬದುಕಬೇಕು; ಕನ್ನಡದಲ್ಲೇ ಸಾಯಬೇಕು. ನಿಧನದ ಮಾತು ಹಾಗಿರಲಿ, ಕನ್ನಡ ನಮ್ಮ ತವನಿಧಿ ಎಂಬ ಅರಿವು ನಮಗಿರಲಿ! 
ಕನ್ನಡದ ಪರಂಪರೆ ಸುದೀರ್ಘ ಶ್ರೀಮಂತವಾದುದು. 'ಅನೇಕ ಶತಮಾನಗಳು ಚರಿತ್ರೆಯನ್ನು ರೂಪಿಸುತ್ತವೆ; ಚರಿತ್ರೆಯ ಅನೇಕ ಶತಮಾನಗಳು ಪರಂಪರೆಯನ್ನು ರೂಪಿಸುತ್ತವೆ' ಎಂಬ ಎಸ್. ರಾಧಾಕೃಷ್ಣನ್ ಅವರ ಉಕ್ತಿ ಕನ್ನಡಕ್ಕೆ ಚೆನ್ನಾಗಿ ಅನ್ವಯಿಸುತ್ತದೆ. ಶಾಸನ ಕ್ಷೇತ್ರದ ದಿಗ್ಗಜ ಜೆ.ಎಫ್. ಫ್ಲೀಟ್ ಅವರು ಒಂದು ಶತಮಾನಕ್ಕೂ ಹಿಂದೆ ಹೇಳಿದರು : '
                ಸುಲಿದ ಬಾಳೆಯ ಹಣ್ಣಿನಂದದಿ
                ಕಳಿದ ಸಿಗುರಿನ ಕಬ್ಬಿನಂದದಿ
                ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
                ಲಲಿತವಹ ಕನ್ನಡದ ನುಡಿಯಲಿ
                ತಿಳಿದು ತನ್ನೊಳು ತಾನು ಮೋಕ್ಷವ
                ಗಳಿಸಿಕೊಂಡರೆ ಸಾಲದೇ ಸಂಸ್ಕೃತದೊಳಿನ್ನೇನು
ಎಂಬ ಮಹಲಿಂಗರಂಗನ ‘ಅನುಭವಾಮೃತ’ದ ಪ್ರಶ್ನೆ ಇಂದಿಗೂ ಪ್ರಸ್ತುತವಾದದ್ದು. ಸಂಸ್ಕೃತ ರೂಢಮೂಲವಾಗಿದ್ದ ಕಾಲದಲ್ಲಿ ಒಬ್ಬ ವೈದಿಕ ಕವಿಯಾಗಿ ಅವನು ಹೀಗೆ ಕೇಳಿದ್ದು ಮಹತ್ವದ ಸಂಗತಿ. ಇಂದು ನಾವು 'ಇಂಗ್ಲಿಷಿನೊಳಿನ್ನೇನು?' ಎಂದು ಕೇಳಬೇಕಾಗಿಲ್ಲ. ಆದರೆ ಕನ್ನಡದಲ್ಲೆ ‘ಮೋಕ್ಷ’ ಸಾಧ್ಯ.
ವಚನಕಾರರು ಕನ್ನಡವನ್ನು ದೇವಭಾಷೆಯ ಮಟ್ಟಕ್ಕೆ ಏರಿಸಿದರು. ಈ ಕಾಲದಲ್ಲಿ ಕುವೆಂಪು ಒಂದೆಡೆ ಆ ಕೆಲಸ ಮಾಡಿರುವುದನ್ನು ಲಕ್ಷಿಸಬಹುದು. ಅವರು ಹೇಳುತ್ತಾರೆ: 'ಕನ್ನಡದಲಿ ಹರಿ ಬರೆಯವನು, ಕನ್ನಡದಲಿ ಹರ ತಿರಿಯುವನು!' ನಾವಿಂದು ಕನ್ನಡದಲ್ಲಿ ಬರೆಯುತ್ತಿಲ್ಲ. ತಿರುಪೆಯ ಮಾತು ಬೇಡ. ಕನ್ನಡ ಹಿರಿದು!
ಕನ್ನಡದ, ಕನ್ನಡಿಗರ ಸಮಸ್ಯೆಗಳು ಒಂದಲ್ಲ, ಎರಡಲ್ಲ; ಅವು ಹಲವು ಹೆಡೆಗಳ ಆದಿಶೇಷ; ಎಷ್ಟು ಹೇಳಿದರೂ ಉಳಿದಿರುತ್ತದೆ, ಶೇಷ! ಕುವೆಂಪು ಒಮ್ಮೆ ನನ್ನೊಡನೆ ಮಾತನಾಡುತ್ತ ಹೇಳಿದರು ``We are in the middle of the battle -field'' (ರಣರಂಗದ ನಡುವೆ ಇದ್ದೇವೆ.) ಹೋರಾಟ ಮುಗಿಯುವುದೆಂದು? ಗೆಲುವು ಎಂದು?
ಕರ್ನಾಟಕದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇರುವುದು ಹೆಮ್ಮೆಯ ವಿಷಯವಲ್ಲ; ಅದು ದುರ್ದೈವದ ಸಂಗತಿಯೇ. ಹೊರ ರಾಜ್ಯಗಳಲ್ಲಿ, ಹೊರ ದೇಶಗಳಲ್ಲಿ ಅಂಥ ಸಂಸ್ಥೆಯೊಂದು ಇದ್ದರೆ, ನಾವು ಹೆಮ್ಮೆ ಪಡಬಹುದಿತ್ತು. ಅದು ಕನ್ನಡನಾಡಿನಲ್ಲೇ ಇರುವುದು ಕನ್ನಡದ ದುರವಸ್ಥೆಗೆ ಹಿಡಿದ ಕನ್ನಡಿಯೇ ಸರಿ. ವಾಸ್ತವವಾಗಿ, ಕರ್ನಾಟಕದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಿದೆ; ಕನ್ನಡವಿಲ್ಲ. ಹೊರಗೆ ಪ್ರಾಧಿಕಾರವಿಲ್ಲ; ಎಷ್ಟೋ ಕಡೆ ಕನ್ನಡದ ಕಳಕಳಿಯಿದೆ. ಪ್ರಾಧಿಕಾರ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ‍್ಯ ನಿರ್ವಹಿಸಬೇಕು.
'ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ಣಾಟಕ ಮಾತೆ!' ಎಂದು ಕುವೆಂಪು ಅರ್ಥಪೂರ್ಣವಾಗಿ ಹಾಡಿದರು. ಬಹ್ವಂಶಗಳಲ್ಲಿ ತಾಯಿ-ಮಗಳ ಅವಸ್ಥೆ ಒಂದೇ ಆಗಿದೆ. ಗಾಂಧೀಜಿಯ ನೇತೃತ್ವದಲ್ಲಿ ಸ್ವಾತಂತ್ರ್ಯ ಯುದ್ಧವೊಂದು ನಡೆದು ೬೫ ವರ್ಷಗಳ ಹಿಂದೆ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಬಂತು. ``The king is dead, long live the King'' (ರಾಜ ಸತ್ತ, ಆದರೆ ರಾಜ ದೀರ್ಘಾಯುವಾಗಲಿ) ಎಂಬ ವ್ಯಂಗ್ಯೋಕ್ತಿಯಂತೆ ಇಂಗ್ಲಿಷರು ಹೋದರು, ಆದರೆ ಇಂಗ್ಲಿಷ್ ಹೋಗಲಿಲ್ಲ. ಒಂದು ರೀತಿಯಲ್ಲಿ ವಸಾಹತುಶಾಹಿ ವ್ಯವಸ್ಥೆ ಉಳಿದುಕೊಂಡಿತು. ಮಾನಸಿಕ ಗುಲಾಮಗಿರಿ, ವೈಚಾರಿಕ ದಾಸ್ಯ ಮುಂದುವರಿಯಿತು. ವಾಮನನಾಗಿ ಬಂದ ಇಂಗ್ಲಿಷ್ ತ್ರಿವಿಕ್ರಮನಾಗಿ ವ್ಯಾಪಿಸಿತು. ಗಾಂಧೀಜಿಯ ಧ್ಯೇಯವಾದ ಸರ್ವೋದಯ ಸಿದ್ಧಿಸಲಿಲ್ಲ. 
ಸ್ವಾತಂತ್ರ್ಯ ಚಳವಳಿಯ ಜೊತೆಜೊತೆಯಲ್ಲೇ ಕರ್ನಾಟಕ ಏಕೀಕರಣ ಚಳವಳಿಯೂ ನಡೆದು ೫೫ ವರ್ಷಗಳ ಹಿಂದೆ ರಾಜ್ಯೋದಯವಾಯಿತು. ಆದರೂ ಅದರ ಆಶಯ ಇಂದಿಗೂ ಈಡೇರಿಲ್ಲ. ನಾಡು, ನುಡಿಗಳ ಸರ್ವತೋಮುಖ ಅಭ್ಯುದಯ, ಕನ್ನಡಿಗರ ಏಳಿಗೆ ಸಿದ್ಧಿಸಿಲ್ಲ. ನಾವು ಪ್ರಗತಿ ಸಾಧಿಸಿಯೇ ಇಲ್ಲ ಎಂದರೆ ತಪ್ಪಾದೀತು. ಆದರೆ ಎರಡು ಹೆಜ್ಜೆ ಮುಂದಕ್ಕೆ ಹೋಗಿ, ನಾಲ್ಕು ಹೆಜ್ಜೆ ಹಿಂದಕ್ಕೆ ಬರುವುದು ನಮ್ಮ ಪ್ರಗತಿಯ ಪರಿ : ಮುಂದೆ ಹೋದದ್ದು ಕಾಣುತ್ತದೆ, ಹಿಂದೆ ಬಂದದ್ದು ಕಾಣಿಸುವುದಿಲ್ಲ. ಇದು ಪ್ರಗತಿಯ ಆಭಾಸ. ಮುಖ್ಯವಾದ, ಮೂಲಭೂತವಾದ ಸಂಗತಿಯೆಂದರೆ, ಸರ್ವೋದಯ ಅಂತ್ಯೋದಯಗಳಿಗೂ ದೇಶಭಾಷಾ ಅಥವಾ ಮಾತೃಭಾಷಾ ಮಾಧ್ಯಮಕ್ಕೂ ಅವಿನಾಭಾವ ಸಂಬಂಧವಿದೆ. ಮಾತೃಭಾಷೆ ಎಲ್ಲ ಸ್ತರಗಳಲ್ಲಿ ಆಡಳಿತ ಮಾಧ್ಯಮ ಮತ್ತು ಶಿಕ್ಷಣ ಮಾಧ್ಯಮ ಆಗಬೇಕು; ಆಗಿಲ್ಲ ಎನ್ನುವುದೇ ದುರಂತ.
ಈಗ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಎಂಬ ‘ತ್ರಿಕರಣ’ಗಳ ‘ಸುನಾಮಿ’ಯ ವಿರುದ್ಧ ನಾವು ತ್ರಿಕರಣಪೂರ್ವಕವಾಗಿ ಹೋರಾಡಿ ‘ದೇಸಿ’ಯನ್ನು ಉಳಿಸಿಕೊಳ್ಳಬೇಕಾಗಿದೆ. ದೇಸಿಯ ಗುರಾಣಿಯನ್ನೊಡ್ಡಿ ‘ಗುರುತ್ವ’ವನ್ನು ಕಾಪಾಡಿಕೊಳ್ಳಬೇಕಾಗಿದೆ. ಪಶ್ಚಿಮದ ಅಂಧಾನುಕರಣದಿಂದ, ಅಸಹಜ ಪ್ರಭಾವದಿಂದ ಪಾರಾಗಿ ನಮ್ಮ ಅನನ್ಯತೆಯನ್ನು, ಸ್ವಂತಿಕೆಯನ್ನು ಸ್ಥಾಪಿಸಬೇಕಾಗಿದೆ. ಒಂದರ್ಥದಲ್ಲಿ ನಾವು ಸಾಂಸ್ಕೃತಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ; ಇನ್ನೊಂದು ಕಡೆ ರೈತರು ಅಕ್ಷರಶಃ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ! ಹಿಂದೆ ಹೇಳಿದ ಮೂರು ಕರಣಗಳಿಂದ ಒಳ್ಳೆಯದಾಗಿಲ್ಲವೆಂದಲ್ಲ; ಆದರೆ ಕೆಟ್ಟದ್ದೇ ಮಿಗಿಲು.
ಕಳೆದ ಸಮ್ಮೇಳನದಲ್ಲಿ ಅಧ್ಯಕ್ಷರಾದ ಪ್ರೊ. ವೆಂಕಟಸುಬ್ಬಯ್ಯನವರು ಇಂಗ್ಲಿಷನ್ನು ‘ಕೊಲೆಗಡುಕ ಭಾಷೆ’ ಎಂದು ಕರೆದರು. ಸತ್ಯಗರ್ಭಿತವಾಗಿಯೂ ಮಾತು ತುಸು ಕಟುವಾಯಿತು. ಇಂಗ್ಲಿಷಿನಿಂದ ನಮಗಾಗಿರುವ ಅಪಾರ ಉಪಕಾರವನ್ನು ಮರೆಯಬಹುದೆ? ಆದರೆ ಅದರ ಮಹಾ ಅನರ್ಥಗಳನ್ನು ಇಂದು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾಗಿದೆ.
ರಾಷ್ಟ್ರಪಿತರ ಕೆಲವು ಹೇಳಿಕೆಗಳನ್ನು ನಾವಿಲ್ಲಿ ನೆನೆಯಬೇಕು : 'ವಿನಾಶಕಾರಿಯಾದ ಪರಕೀಯ ಮಾಧ್ಯಮವೊಂದನ್ನು ದೇಶದ ತರುಣ ಜನಾಂಗದ ಮೇಲೆ ಹೊರಿಸಿದ್ದು ಪರಾಡಳಿತದ ದೊಡ್ಡ ಅನಾಹುತಗಳಲ್ಲಿ ಒಂದು'; 'ಇಂದಿನ ಶಿಕ್ಷಣ ಪದ್ಧತಿ ಪಾಪದಲ್ಲಿ ಪರಿಪೋಷಿತವಾಗಿದೆ; ನಮ್ಮ ಮಕ್ಕಳನ್ನು ನಮ್ಮ ನೆಲದಲ್ಲೆ ಅಪರಿಚಿತರನ್ನಾಗಿ ಮಾಡಿದೆ'; 'ನಾನು ನನ್ನ ಮಾತೃಭಾಷೆಯಾದ ಗುಜರಾತಿಯಲ್ಲಿ ಕಲಿತಿದ್ದರೆ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಬಹುದಿತ್ತು'; 'ಒಬ್ಬ ಹುಡುಗ ತನ್ನ ತಂದೆಗೆ ಇಂಗ್ಲಿಷಿನಲ್ಲಿ ಪತ್ರ ಬರೆಯುವುದನ್ನು ನೋಡಿದಾಗ, ನನ್ನ ಕಣ್ಣಿನಲ್ಲಿ ನೀರು ಬರುತ್ತದೆ'; 'ನಮ್ಮ ಪರಂಪರೆಯ ಮೇಲೆಯೆ ನಾವು ಮನೆ ಕಟ್ಟಬೇಕು'.
ಈಗ ಎರಡನೆಯ ಸ್ವಾತಂತ್ರ್ಯ ಚಳವಳಿಯೊಂದು ನಡೆಯಬೇಕಾಗಿದೆ, ಎರಡು ಉದ್ದೇಶಗಳ ಸಾಧನೆಗಾಗಿ : ಒಂದು ಭ್ರಷ್ಟಾಚಾರದ ಅನಿಷ್ಟ ಶನಿಯಿಂದ ಬಿಡುಗಡೆ; ಮತ್ತೊಂದು ಪಾಶ್ಚಾತ್ಯ ನಾಗರಿಕತೆ, ಸಂಸ್ಕೃತಿಗಳ ಪ್ರಾಬಲ್ಯ, ಪ್ರಭಾವಗಳಿಂದ ಬಿಡುಗಡೆ. ಗಾಂಧಿವಾದಿ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನ, ಅದರ ಬಗೆಗೆ ಏನೇ ವಾದವಿವಾದಗಳಿದ್ದರೂ, ಅತ್ಯಂತ ಸ್ವಾಗತಾರ್ಹವಾದದ್ದು ಮತ್ತು ಆಶಾದಾಯಕವಾದದ್ದು. ಅದೊಂದು ಭಾರಿ ಸಂಚಲನವುಂಟುಮಾಡಿರುವುದನ್ನು, ಯುವ ಜನತೆ ಅತ್ತ ಆಕರ್ಷಿತವಾಗಿರುವುದನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ.
ನಿರ್ದಿಷ್ಟವಾಗಿ ಕರ್ನಾಟಕದ ವಿಷಯಕ್ಕೆ ಬರೋಣ. ಕನ್ನಡಿಗರು ಅಭಿಮಾನಶೂನ್ಯರೆಂಬುದು ಪ್ರಸಿದ್ಧವಾದ ಸಂಗತಿ. ಅದೇ ನಮ್ಮ ಸಮಸ್ಯೆಗಳ ತಾಯಿಬೇರಾಗಿದೆ. (ತಾಯಿಗೆ ತಕ್ಕ ಸ್ಥಾನಮಾನಗಳಿಲ್ಲವಾಗಿದೆ!) ನಮ್ಮ ಭಾಷೆ, ಸಂಸ್ಕೃತಿಗಳ ಬಗೆಗೆ ನಮಗೆ ಇರಬೇಕಾದ ಪ್ರೀತಿಯಿಲ್ಲ, ಅಭಿಮಾನವಿಲ್ಲ. ವಾಸ್ತವವಾಗಿ ಅಭಿಮಾನ ಕನ್ನಡ ಸಂಸ್ಕೃತಿಯ ಜೀವಗುಣ. ‘ಕವಿರಾಜಮಾರ್ಗ’ದಲ್ಲಿ ಕನ್ನಡಿಗರನ್ನು 'ಅಭಿಮಾನಿಗಳ್, ಅತ್ಯುಗ್ರರ್' ಎಂದು ಕರೆಯಲಾಗಿದೆ. ಆ ಅಭಿಮಾನವೆ ಕಾವೇರಿಯಿಂದ ಗೋದಾವರಿಯವರೆಗೆ ವಿಶಾಲ ಸಾಮ್ರಾಜ್ಯವೊಂದನ್ನು ಕಟ್ಟಲು ಕಾರಣವಾಯಿತು. ಈಗ ಕನ್ನಡ ನಾಡು ಕಾವೇರಿಯಿಂದ ಇದೆಯಷ್ಟೆ; ಮುಂದೆ ಅದಕ್ಕೂ ಆಪೋಹವೊದಗೀತು!
ಪಂಪನ ಕರ್ಣನಾಡುವ ಒಂದು ಮಾತು ಇಂದಿಗೆ ಅತ್ಯಂತ ಪ್ರಸ್ತುತವಾಗಿದೆ : 'ಗುಣಂ ಕುಲಂ, ಅಭಿಮಾನಮೊಂದೆ ಕುಲಂ'. ಸಮಾಜ ಜಾತಿ, ಮತ ಜರ್ಜರಿತವಾಗಿರುವ ಈ ಹೊತ್ತಿನ ಪರಿಸ್ಥಿತಿಯಲ್ಲಿ ಅಭಿಮಾನವೊಂದೆ, ಗುಣಾಢ್ಯತೆಯೊಂದೆ ನಮ್ಮ ಜಾತಿಯಾಗಬೇಕಿದೆ; ಕುಲವಾಗಬೇಕಿದೆ. ನಾವು ‘ಸಾಧು’ಗಳಾಗದೆ, ಸಾತ್ತ್ವಿಕ ಎನ್ನಬಹುದಾದ ಉಗ್ರತೆಯನ್ನೂ ನಮ್ಮ ವ್ಯಕ್ತಿತ್ವಕ್ಕೆ ಅಳವಡಿಸಿಕೊಂಡು, ನಮ್ಮ ನೆಲ-ಜಲಗಳನ್ನು, ನುಡಿ, ಗಡಿಗಳನ್ನು ರಕ್ಷಿಸಿಕೊಳ್ಳಬೇಕಾಗಿದೆ.
ಕರ್ನಾಟಕ ಅನ್ಯಭಾಷೆಗಳ, ಅನ್ಯಭಾಷಿಕರ ಮೇಹುಗಾಡಾಗಿದೆ. ತಮ್ಮ ಔದಾರ‍್ಯತೆ, ಅಲಕ್ಷ್ಯತೆ ನಮಗೆ ಮುಳುವಾಗಿದೆ; ಮುಂಬರಿವಿಗೆ ಮುಳ್ಳಾಗಿದೆ. ನಮ್ಮ ನೆಲದಲ್ಲೆ ನಾವು ‘ಪರದೇಶಿ’ಗಳಾಗಿದ್ದೇವೆ. ನಮ್ಮ ತಾಯಿ ಕನ್ನಡಕ್ಕೆ ಮೊದಲ ಮಣೆ, ಮನ್ನಣೆಗಳು ಸಿಗಬೇಕು; ಈಗ ಪರಿಸ್ಥಿತಿ ಅಂತಿಲ್ಲ ಎಂಬುದು ವಿಷಾದನೀಯ ವಿಪರ‍್ಯಾಸ. ಕನ್ನಡ ಕಲಿಯದೇ ಕನ್ನಡಿಗರೊಂದಿಗೆ ಹೊಂದಿಕೊಳ್ಳದೇ ಕನ್ನಡನಾಡಿನಲ್ಲಿ ಯಾರೂ ಬದುಕುವಂತಾಗಬಾರದು. ಕನ್ನಡದ ಅನ್ನ ತಿಂದು, ಕನ್ನ ಹಾಕುವ ಅವಕಾಶ ಯಾರಿಗೂ ಇರಕೂಡದು!
ಕರ್ಣಾಟಕದ ರಾಜಧಾನಿಯಲ್ಲಿ ಕನ್ನಡಿಗರ ಸಂಖ್ಯೆ ಶೇಕಡ ೩೦ ಎಂಬುದು ಎಂಥ ವಿಪರ‍್ಯಾಸ! ಅದು ಕೇಂದ್ರಾಡಳಿತ ಪ್ರದೇಶವಾಗಲಿ ಎಂಬ ಕೂಗು ಒಮ್ಮೆ ಕೇಳಿಬರಲಿಲ್ಲವೆ? ಇದನ್ನೆಲ್ಲ ನೋಡಿದರೆ 'ಕುರುಧರೆಯೊಳ್ ಕುರುಪತಿಯನರಸಿದನ್ ಪವನಸುತಂ' ಎಂಬ ರನ್ನನ ಉಕ್ತಿ ನೆನಪಾಗುತ್ತದೆ. ಮುಂದೊಮ್ಮೆ ಕರ್ನಾಟಕದಲ್ಲಿ ಕನ್ನಡವನ್ನು ಅರಸುವ ಪರಿಸ್ಥಿತಿ ಪ್ರಾಪ್ತವಾಗಬಹುದು.
ಕನ್ನಡಿಗರಲ್ಲಿ ಒಗ್ಗಟ್ಟಿಲ್ಲ ಎನ್ನುವುದೊಂದು ಮೂಲಭೂತ ಸಮಸ್ಯೆ; ವಿಷಾದನೀಯ ಸತ್ಯ. ಆದ್ದರಿಂದ ಕುವೆಂಪು ‘ಕರ್ಣಾಟಕ ಹೃದಯಶಿವ’ನಿಗೆ ಮೊರೆಯಿಟ್ಟರು, 'ಕಚ್ಚಾಡುವರನು ಕೂಡಿಸಿ ಒಲಿಸು, ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು!' ಎಂದು. ಕಾಲೆಳೆಯುವ ಪ್ರವೃತ್ತಿ ಕನ್ನಡಿಗರಲ್ಲಿ ವಿಶೇಷ. ಮುಂದುವರಿದು ಕುವೆಂಪು ಹೇಳುತ್ತಾರೆ: 'ಸತ್ತಂತಿಹರನು ಬಡಿದೆಚ್ಚರಿಸು!' ಸತ್ತವರನ್ನು ಎಬ್ಬಿಸುವ ಪ್ರಶ್ನೆಯೆ ಇಲ್ಲ; ನಿದ್ದೆ ಮಾಡುವವರನ್ನು ಎಬ್ಬಿಸಬಹುದು. ಆದರೆ ಸತ್ತಂತಿರುವವರನ್ನು, ನಿದ್ರಿಸುವಂತೆ ನಟಿಸುವವರನ್ನು ಎಬ್ಬಿಸುವುದು ಅಸಾಧ್ಯ. ಆಚಾರ್ಯ ‘ಶ್ರೀ’ಯವರ ಈ ಹೇಳಿಕೆಯನ್ನು ಪರಿಭಾವಿಸಬಹುದು. 'ಹಿಂದೆ ಯೂರೋಪಿನಲ್ಲಿ ರಿನೇಸಾನ್ಸ್ ಎಂಬ ಸಾಹಿತ್ಯದ ಪುನರ್ಜನ್ಮವುಂಟಾದಾಗ ಒಬ್ಬ ಮಹಾಪಂಡಿತನು ‘ನಾವು ಸತ್ತವರನ್ನು ಎಬ್ಬಿಸುವುದಕ್ಕೆ ಹೋಗುತ್ತೇವೆ' ಎಂದು ಘೋಷಿಸಿದನು. ನಾವು ಕನ್ನಡಿಗರು ಇಂದು ಸತ್ತವರನ್ನು ಎಬ್ಬಿಸುವುದೇ ಅಲ್ಲ, ಬದುಕಿರುವವರನ್ನೂ ಎಚ್ಚರಗೊಳಿಸುವುದಕ್ಕೆ ಹೊರಟಿರುವೆವು. ಒಗ್ಗಟ್ಟು, ಎಚ್ಚರ ಎರಡೂ ಅಪೇಕ್ಷಣೀಯ.
ಶಿಕ್ಷಣ ಮಾಧ್ಯಮದ ಪ್ರಶ್ನೆ ಜ್ವಲಂತವಾದದ್ದು. ಮಾತೃಭಾಷಾ ಮಾಧ್ಯಮ, ಅದರಲ್ಲೂ ಪ್ರಾಥಮಿಕ ಹಂತದಲ್ಲಿ ಶ್ರೇಷ್ಠ ಮತ್ತು ಶ್ರೇಯಸ್ಕರ ಎಂದು ಎಲ್ಲ ಶಿಕ್ಷಣತಜ್ಞರೂ ಮನೋವಿಜ್ಞಾನಿಗಳೂ ಭಾಷಾವಿಜ್ಞಾನಿಗಳೂ ಸಾರಿಹೇಳಿದ್ದಾರೆ. ಆದರೆ ಅವರ ಹೇಳಿಕೆಯನ್ನು ನಾವು ಕಿವುಡುಗೇಳಿದ್ದೇವೆ. ಜ್ಞಾನವಿಜ್ಞಾನಗಳ ಭಂಡಾರದ ಬಾಗಿಲು ತೆರೆಯುವ ಏಕೈಕ ಕೀಲಿಕೈ, ತಾಯ್ನುಡಿ. ಶಿಕ್ಷಣದ ಗುರಿಗಳಾದ ಸೃಜನಶೀಲತೆ, ವೈಚಾರಿಕತೆಗಳನ್ನು ಮಾತೃಭಾಷಾ ಮಾಧ್ಯಮದಲ್ಲಿ ಮಾತ್ರ ತಿಳಿಸುವುದು ಶಕ್ಯ. ಇದು ಎಸ್. ರಾಧಾಕೃಷ್ಣನ್ ಅವರ ಸೂಕ್ತಿ : 'ಜ್ಞಾನವು ಆಸಕ್ತಿ, ಶಕ್ತಿಗಳ ಸತತ ಚಿಲುಮೆ. ಆದರೆ ಅದರ ದಾರಿ ಸಂಕುಚಿತ ಮತ್ತು ಕಷ್ಟಕರ. ನಮ್ಮದಲ್ಲದ ಬೇರೊಂದು ಭಾಷೆ ನೀಡುವ ಅಪರಿಚಿತವೂ  ಅಸ್ಪಷ್ಟವೂ ಆದ ಬೆಳಕಿನಲ್ಲಿ ಆ ದಾರಿಯನ್ನು ಕ್ರಮಿಸುವುದು ಸುಲಭವಲ್ಲ'. ಆದ್ದರಿಂದ ಇದು ಅಭಿಮಾನದ ಪ್ರಶ್ನೆ ಮಾತ್ರವಲ್ಲ, ಅನುಕೂಲತೆಯ ಪ್ರಶ್ನೆ ಕೂಡ. ಇದು ಕುವೆಂಪು ಅವರ ಮಾತು : 'ಶಿಕ್ಷಣದ ಕಟ್ಟಡವನ್ನು ಕನ್ನಡದ ಇಟ್ಟಿಗೆಗಳಿಂದ ಕಟ್ಟಿ : ಅದು ಗಟ್ಟಿ!' ಇಲ್ಲಿರುವುದು ಪ್ರಾಸ ಮಾತ್ರವಲ್ಲ.
ಮಾಧ್ಯಮವಾಗಿ ಇಂಗ್ಲಿಷನ್ನು ಕಲಿಯುವುದಕ್ಕೂ ಒಂದು ಭಾಷೆಯಾಗಿ ಕಲಿಯುವುದಕ್ಕೂ ಇರುವ ಅಂತರವನ್ನು ನಮ್ಮ ಜನ ಅರ್ಥ ಮಾಡಿಕೊಳ್ಳದಿರುವುದು ದುರಂತವೆಂದೇ ಹೇಳಬೇಕು. ಒಂದು ಭಾಷೆಯಾಗಿ ಇಂಗ್ಲಿಷನ್ನು ಅತ್ಯಗತ್ಯವಾಗಿ ಕಲಿಸಬೇಕು; ಕಲಿಯಬೇಕು. ಆದರೆ ಚೆನ್ನಾಗಿ ಕಲಿಯಬೇಕು ಎಂಬುದೂ ಮುಖ್ಯ. ಕನ್ನಡದ ಬಗೆಗೂ ಈ ಮಾತು ದಿಟ. ಈಗ ನಮ್ಮ ವಿದ್ಯಾರ್ಥಿಗಳು ಅತ್ತ ಸರಿಯಾಗಿ ಇಂಗ್ಲಿಷೂ ಬರದ, ಇತ್ತ ಸರಿಯಾಗಿ ಕನ್ನಡವೂ ಬರದ ತ್ರಿಶಂಕುಸ್ಥಿತಿಯಲ್ಲಿದ್ದಾರೆ. ದಕ್ಷ ಅಧ್ಯಾಪಕರ ಕೊರತೆ ಒಂದು ದೊಡ್ಡ ಸಮಸ್ಯೆ. ಸಮರ್ಥ ವಿದ್ಯಾರ್ಥಿಗಳನ್ನು ಮಾತ್ರವಲ್ಲ, ಸಮರ್ಥ ಅಧ್ಯಾಪಕರನ್ನು ಮೊದಲು ಸೃಷ್ಟಿಸಬೇಕಾಗಿದೆ ಎಂಬುದೊಂದು ವಿಚಿತ್ರ! ಸ್ವಾಮಿ ವಿವೇಕಾನಂದರಿಗೆ ಬಾಲ್ಯದಲ್ಲಿ ಇಂಗ್ಲಿಷಿನ ಬಗ್ಗೆ ತಿರಸ್ಕಾರವೇ ಇತ್ತು. ಆದರೆ ತಂದೆತಾಯಿಗಳ ಒತ್ತಾಯದಿಂದ ಅವರು ಇಂಗ್ಲಿಷ್ ಕಲಿತರು; ಚೆನ್ನಾಗಿಯೆ ಕಲಿತರು! ಎಷ್ಟರಮಟ್ಟಿಗೆಂದರೆ, ತಮ್ಮ ಅದ್ಭುತ ವಿಚಾರಧಾರೆಯಿಂದ ಮಾತ್ರವಲ್ಲ, ಆಂಗ್ಲಭಾಷಾ ಪ್ರಭುತ್ವದಿಂದಲೂ ಜಗತ್ತನ್ನೆ ಗೆದ್ದರು. (ನಾವು ಯಾರ ಜಗತ್ತನ್ನು ಗೆಲ್ಲಬೇಕಿದೆ?) ಆದರೂ ಅವರು ಹೇಳುತ್ತಾರೆ : 'ಜನರಿಗೆ ಅವರಾಡುವ ಭಾಷೆಯಲ್ಲಿ ಶಿಕ್ಷಣ ಕೊಡಿ.'
ನಮ್ಮಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಅದ್ದೂರಿಯಾಗಿ, ಕಣ್ಣು ಕುಕ್ಕುತ್ತ ವಿಜೃಂಭಿಸುತ್ತಿವೆ. ಅವುಗಳ ಮುಂದೆ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಮಂಕಾಗಿ ತಲೆತಗ್ಗಿಸಿ ನಿಂತಿವೆ. ಕಲಿಯುವ ವಿದ್ಯಾರ್ಥಿಗಳು ಕೀಳರಿಮೆಯಿಂದ ಬಳಲುತ್ತಾರೆ. ಅಷ್ಟೆ ಅಲ್ಲ, ಒಂದು ಬಗೆಯ ನವ ಅಸ್ಪೃಶ್ಯತೆಯನ್ನು ಆಂಗ್ಲ ಮಾಧ್ಯಮ ಹುಟ್ಟುಹಾಕಿದೆ. ಈ ತಾರತಮ್ಯವನ್ನು ಹೋಗಲಾಡಿಸುವ ‘ಸಮಾನ ಶಿಕ್ಷಣ’ ಅಥವಾ ಶಿಕ್ಷಣದಲ್ಲಿ ಸಮಾನತೆ ಬೇಕಾಗಿದೆ. ಅದು ಸಿದ್ಧಿಸಿದಾಗ ಪ್ರಜಾಪ್ರಭುತ್ವಕ್ಕೆ ಅರ್ಥ ಸಮನಿಸುತ್ತದೆ. ಇಂಗ್ಲಿಷ್ ಮಾಧ್ಯಮ ಶಾಲೆಗಳೆ ತಲೆಯೆತ್ತಕೂಡದು; ಇರುವ ಇಂಗ್ಲಿಷ್ ಶಾಲೆಗಳು ಕನ್ನಡ ಶಾಲೆಗಳಾಗಿ ಬದಲಾಗಬೇಕು. ಆದರೆ ಇದು ಆದರ್ಶ ಸ್ಥಿತಿ; ವಾಸ್ತವ ಬೇರೆ. ಕುವೆಂಪು ಹೇಳುವ ‘ಪ್ರಚ್ಛನ್ನ ಭ್ರಷ್ಟಾಚಾರ’ಕ್ಕೂ ಆದರ್ಶಕ್ಕೂ ಎತ್ತಣ ಸಂಬಂಧ?
ರಾಜ್ಯದ ಉಚ್ಚನ್ಯಾಯಾಲಯ ೨೦೦೮ರಲ್ಲಿ ಶಿಕ್ಷಣ ಮಾಧ್ಯಮದ ಹಕ್ಕು ಪೋಷಕರ ಆಯ್ಕೆಗೆ ಬಿಟ್ಟದ್ದು, ಅನುದಾನರಹಿತ ಶಾಲೆಗಳಲ್ಲಿ ಮಾಧ್ಯಮದ ನಿರ್ಬಂಧ ವಿಧಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ತೀರ್ಪಿತ್ತಿತು. ಈಗ ರಾಜ್ಯ ಸರ್ಕಾರದ ಮೇಲ್ಮನವಿ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಅದು ಬೇಗ ಇತ್ಯರ್ಥವಾಗುವಂತೆ ಸರಕಾರ ಕ್ರಮ ಕೈಗೊಳ್ಳಬೇಕು. ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸುತ್ತೇವೆಂದು ಮುಚ್ಚಳಿಕೆ ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮದಲ್ಲಿ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಬೇಕು. ಕಾನ್ವೆಂಟ್ ಶಿಕ್ಷಣದಿಂದಾಗಿ ‘ಮಮ್ಮಿ ಡ್ಯಾಡಿ’ ಸಂಸ್ಕೃತಿಯೊಂದು ರೂಪುಗೊಂಡಿದೆ. ‘ಮಮ್ಮಿ’ ಎಂದರೆ ರಕ್ಷಿತ ಶವ ಎಂದರ್ಥ. ಕನ್ನಡದ ಅವಸ್ಥೆಯೂ ಬಹುತೇಕ ಹಾಗೆಯೇ ಇದೆಯಲ್ಲವೆ? ಶವಾವಸ್ಥೆ ಶಿವಾವಸ್ಥೆಯಾಗಬೇಕು, ‘ಕರ್ನಾಟಕ ಹೃದಯಶಿವ’ನ ಕೃಪೆಯಿಂದ! ಸರ್ಕಾರವೆ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಅಥವಾ ತೆರೆಯಿಸಲು ಹೊರಟಿರುವ ಅವಿವೇಕಕ್ಕೆ ಅಥವಾ ಅತಿರೇಕಕ್ಕೆ ಏನು ಹೇಳುವುದು? ತನ್ನ ಘೋಷಿತ ನೀತಿಗೆ ವ್ಯತಿರಿಕ್ತವಾಗಿ ಅದು ನಡೆದುಕೊಳ್ಳುತ್ತಿರುವುದು ಖಂಡನೀಯ. ಇಂಗ್ಲಿಷ್ ಮಾಧ್ಯಮದ ಮೋಹ ಬಹುತೇಕ ಮಹಿಳೆಯರದು. ನಮ್ಮ ತಾಯಂದಿರು ಕನ್ನಡಕ್ಕಾಗಿ ತುಸು ಕರುಳು ಕರಗಿಸಿಕೊಳ್ಳಬೇಕೆಂದು ಆಚಾರ‍್ಯ ‘ಶ್ರೀ’ಯವರು ನೂರು ವರ್ಷಗಳ ಹಿಂದೆಯೆ ವಿನಂತಿಸಿಕೊಂಡರು. ತಾಯಿಯ ಕರುಳು ಎಲ್ಲಿಯೂ ಎಂದೂ ಮಹತ್ತ್ವದ್ದು! ಇಂಗ್ಲಿಷನ್ನು ಒಂದನೆಯ ತರಗತಿಯಿಂದಲೆ ಈಗ ಕಲಿಸಲಾಗುತ್ತಿದೆ. ಅದು ಅನಪೇಕ್ಷಣೀಯವಾದ ಕ್ರಮ. ಅದರಿಂದ ಕನ್ನಡದ ಬಗೆಗೆ ತಾತ್ಸಾರ ಆರಂಭದಲ್ಲೆ ಹುಟ್ಟುವುದು ಸಾಧ್ಯ. ಹಿಂದಿನ ವ್ಯವಸ್ಥೆಯೇ ಸಾಧುವಾಗಿತ್ತು.
ಕನ್ನಡ ಅಳಿಯುತ್ತಿರುವುದು ನಗರ ಪ್ರದೇಶಗಳಲ್ಲಿ ಮಾತ್ರ, ಗ್ರಾಮಾಂತರ ಪ್ರದೇಶಗಳಲ್ಲಿ ಅದು ಸುಸ್ಥಿರವಾಗಿದೆ ಎಂದು ಇದುವರೆಗೆ ನಾವು ತಿಳಿದಿದ್ದೆವು. ಆದರೆ ಈಗ ಅಲ್ಲಿಯೂ ಕನ್ನಡದ ಬೇರುಗಳು ಸಡಿಲವಾಗುತ್ತಿವೆ ಎಂಬುದು ಕಳವಳಕಾರಿ. ಕಾನ್ವೆಂಟ್ ಮೋಹ ಹಳ್ಳಿಗಾಡಿನಲ್ಲೂ ಮೂಡಿ ಬೆಳೆಯುತ್ತಿದೆ. ಜನರ ಬಾಯಲ್ಲಿ ಕನ್ನಡ ಶಬ್ದಗಳು ಮರೆಯಾಗಿ ಇಂಗ್ಲಿಷ್ ಶಬ್ದಗಳು ಅನಗತ್ಯವಾಗಿ ಮೆರೆಯುತ್ತಿವೆ. ನಗರಗಳಲ್ಲಂತೂ ಕೇಳುವುದೇ ಬೇಡ.
ಸದ್ಯದಲ್ಲಿ ಕನ್ನಡಕ್ಕೆ ಬಂದಿರುವ ದೊಡ್ಡ ಕುತ್ತು ಮತ್ತು ವಿಪತ್ತು ಎಂದರೆ, ಸರ್ಕಾರ ಸುಮಾರು ಮೂರು ಸಾವಿರ ಕನ್ನಡ ಶಾಲೆಗಳನ್ನು, ವಿದ್ಯಾರ್ಥಿಗಳ ಸಂಖ್ಯೆ ತೀರ ಕಡಿಮೆ ಎಂಬ ಕಾರಣದಿಂದ ಮುಚ್ಚಲು ಹೊರಟಿರುವುದು. (ಎಷ್ಟೋ ಶಾಲೆಗಳನ್ನು ಈಗಾಗಲೇ ಮುಚ್ಚಲಾಗಿದೆ.) ಮುಚ್ಚುವುದಿಲ್ಲ, ಬೇರೆ ಶಾಲೆಗಳಲ್ಲಿ ವಿಲೀನಗೊಳಿಸುತ್ತೇವೆ ಎಂಬ ಮಾತು 'ಅಳಿಯ ಅಲ್ಲ, ಮಗಳ ಗಂಡ' ಎಂಬ ಗಾದೆಯಂತೆ! ಒಬ್ಬನೇ ಒಬ್ಬ ವಿದ್ಯಾರ್ಥಿಯಿದ್ದರೂ ಅಂಥ ಶಾಲೆಯನ್ನು ಮುಚ್ಚಕೂಡದು ಎಂದು ತಾತ್ತ್ವಿಕವಾಗಿ ಹೇಳಬೇಕಾಗಿದೆ. (ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಏತಕ್ಕೆ ಕಡಿಮೆ ಎಂಬುದೂ ಚಿಂತನೀಯ.) ಶಾಲೆ ಮುಚ್ಚುವುದು ಎಂದರೆ ಕನ್ನಡದ ಬದುಕನ್ನು ಮುಚ್ಚಿ ಮುಗಿಸುವ ಕುತಂತ್ರವೇ ಸರಿ! ಹಳ್ಳಿಗಾಡಿನ ಮಕ್ಕಳ, ಹಿಂದುಳಿದವರ ಮಕ್ಕಳ, ಹೆಣ್ಣುಮಕ್ಕಳ ಶಿಕ್ಷಣ ಅದರಿಂದ ಮೊಟಕಾಗುತ್ತದೆ. ಅದು ಪ್ರಜಾಪ್ರಭುತ್ವ ವಿರೋಧಿ ನಿಲುವು; ಶಿಕ್ಷಣದ ಹಕ್ಕು, ಕಡ್ಡಾಯ ಶಿಕ್ಷಣ ಎಂಬ ಮಾತುಗಳಿಗೆ ಆಗ ಅರ್ಥವೇ ಉಳಿಯುವುದಿಲ್ಲ. ಆಂಗ್ಲ ಮಾಧ್ಯಮಗಳನ್ನು ಉತ್ತೇಜಿಸುವ, ಆಂಗ್ಲ ಮಾಧ್ಯಮ ಶಾಲೆಗಳಿಗೆ ಕುಮ್ಮಕ್ಕು ಕೊಡುವ, ಆ ನಾಯಿಕೊಡೆಗಳ ಸಂತಾನವನ್ನು ಹೆಚ್ಚಿಸುವ ಹುನ್ನಾರ ಹಾಗೂ ಭ್ರಷ್ಟಾಚಾರ ಪ್ರಸಕ್ತಿ ಇಲ್ಲಿದೆಯೆ? ವಾಸ್ತವವಾಗಿ ಇದು ಮಾಧ್ಯಮದ ವ್ಯಾಪಕ ಪ್ರಶ್ನೆಯ ಒಂದು ಅಂಗವಷ್ಟೆ. ಕನ್ನಡ ಶಾಲೆಗಳನ್ನು ಮುಚ್ಚುವುದೆಂದರೆ, ಕನ್ನಡ ಮಾಧ್ಯಮಕ್ಕೆ, ಕನ್ನಡಕ್ಕೆ ಆಘಾತವೆಸಗಿದಂತೆ. ಈ ವಿದ್ಯಮಾನ ಅಥವಾ ಅವಿದ್ಯಮಾನದ ಬಗೆಗೆ ವ್ಯಾಪಕ ಪ್ರತಿಭಟನೆ, ಚಳವಳಿ, ಚರ್ಚೆ ನಡೆಯಬೇಕು. ಕಡೆಗೂ, ಮುಚ್ಚುವುದೇ ಆದರೆ ಆಂಗ್ಲಶಾಲೆಗಳನ್ನು ಮುಚ್ಚಬೇಕು, ಕನ್ನಡ ಶಾಲೆಗಳನ್ನಲ್ಲ!
ಇಲ್ಲಿಯೇ ಹೇಳಬೇಕಾದ ಮುಖ್ಯವಾದ ಮಾತೆಂದರೆ, ಸರ್ಕಾರಿ ಶಾಲೆಗಳಿಗೆ ಎಲ್ಲ ಮೂಲ ಸೌಲಭ್ಯಗಳನ್ನೂ ಒದಗಿಸಬೇಕು, ಅಲ್ಲಿ ಸಿಗುವ ಶಿಕ್ಷಣ ಗುಣಾತ್ಮಕವಾಗಿರಬೇಕು, ಖಾಸಗಿ ಶಾಲೆಗಳೊಡನೆ ಅವು ಸ್ಪರ್ಧಿಸುವಂತಿರಬೇಕು ಎನ್ನುವುದು.
ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆ ೨೦೦೯ ಮಹತ್ವದ ಒಂದು ಮಸೂದೆ. ಅದನ್ನು ದೇಶದ ಬಹುಪಾಲು ರಾಜ್ಯಗಳು ಜಾರಿಗೊಳಿಸಿವೆ; ಕರ್ನಾಟಕ ಸರ್ಕಾರ ಕೈಕಟ್ಟಿ ಕುಳಿತಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವರ ಈ ಹೇಳಿಕೆ ಗಮನಾರ್ಹ: '೨೦೦೯ರ ಶಿಕ್ಷಣ ಹಕ್ಕು ಕಾಯಿದೆ ದೇಶಾದ್ಯಂತ ಜಾರಿಗೊಳ್ಳದಿದ್ದರೆ, ಅದೊಂದು ಐತಿಹಾಸಿಕ ವೈಫಲ್ಯವೇ ಸರಿ!'
ಕನ್ನಡದ ಸ್ಥಾನಮಾನಗಳನ್ನು ಉತ್ತಮೀಕರಿಸುವಲ್ಲಿ ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕು, ಜೊತೆಗೆ ಕ್ರಿಯಾಶಕ್ತಿಯೂ ಬೇಕು. ಯಾವ ಸರ್ಕಾರವೇ ಬರಲಂತೆ, 'ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ!' ಎಂಬ ಗಾದೆಯಂತಾಗಿದೆ, ಕನ್ನಡದ ಸ್ಥಿತಿ. ಇದು ಕನ್ನಡಿಗರ ಕರ್ಮ. ಆದರೆ ನಾವು ನೆನಪಿಡಬೇಕು, 'ಎರಡೂ ಕೈ ಸೇರಿದರೆ ಚಪ್ಪಾಳೆ' ಎಂಬುದನ್ನು. ಜನತೆ ಎಲ್ಲಕ್ಕೂ ಸರ್ಕಾರದತ್ತ ಬೆರಳುಮಾಡಿ, ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು. ಒಟ್ಟಿನಲ್ಲಿ ಕನ್ನಡದ ಬದ್ಧತೆ ಎಲ್ಲ ಹಂತಗಳಲ್ಲಿ ಎಲ್ಲರಿಗೂ ಅಗತ್ಯ. ಬದ್ಧತೆಯಿಂದ ಪ್ರಬುದ್ಧತೆ!
ಅನ್ಯಭಾಷೆಗಳನ್ನು, ಅದರಲ್ಲೂ ಇಂಗ್ಲಿಷನ್ನು ನಾವು ಹಗೆಯಬೇಕಾದ ಪ್ರಮೇಯವಿಲ್ಲ. ‘ಸರ್ವಭಾಷಾ ಸರಸ್ವತಿ’ಯ ವಿಶಿಷ್ಟ ಸ್ತುತ್ಯ ಕಲ್ಪನೆ ನಮ್ಮದು. ಎಲ್ಲ ಭಾಷೆಗಳೂ ವಾಗ್ದೇವಿಯ ಅವಯವಗಳು. ಕನ್ನಡಕ್ಕೆ ಮತ್ತೊಂದು ಹೆಸರು ಎನ್ನಬಹುದಾದ ಕುವೆಂಪು ಹೇಳುತ್ತಿದ್ದರು, 'ನಾನು ಇಂಗ್ಲಿಷಿನ ಮೂಲಕ ಕನ್ನಡಕ್ಕೆ ಬಂದವನು' ಎಂದು; ಆಚಾರ್ಯ ‘ಶ್ರೀ’ಯವರಂತೂ ಇಂಗ್ಲಿಷಿನಿಂದಲೇ ಕನ್ನಡಕ್ಕೆ ಬಂದವರು. ಆದರೆ ಇಂಗ್ಲಿಷ್ ಕನ್ನಡಕ್ಕೆ ಪೋಷಕವಾಗಿ, ಪೂರಕವಾಗಿ ದುಡಿಯಬೇಕು; ಮಾರಕವಾಗಬಾರದು. ಅದರಿಂದ ಕನ್ನಡಕ್ಕೆ ‘ದೋಹದ’ವಾಗಬೇಕು. ಹದ, ಹದುಳ ಎಲ್ಲಿಯೂ ಅಪೇಕ್ಷಣೀಯ. ಇಂಗ್ಲಿಷ್ ಅಂತರರಾಷ್ಟ್ರೀಯ ಭಾಷೆ ಎನ್ನುವುದು ಮತ್ತೊಂದು ಬೃಹದ್‌ಭ್ರಮೆ. ಎಷ್ಟೋ ದೇಶಗಳಲ್ಲಿ ಇಂಗ್ಲಿಷ್ ಇಲ್ಲ. ಆ ದೇಶಗಳ ಜನ ತಮ್ಮ ತಮ್ಮ ಭಾಷೆಯಲ್ಲೆ ಉತ್ಕರ್ಷ, ಉದ್ಧಾರಗಳನ್ನು ಸಾಧಿಸಿದ್ದಾರೆ ಎಂಬುದನ್ನು ನೆನೆಯಬೇಕು. ನಮಗೇಕೆ ಇಂಗ್ಲಿಷ್ ಮೆಚ್ಚು ಮತ್ತು ಹುಚ್ಚು? ಹುಸಿ ಹೆಮ್ಮೆಯ, ಒಣ ಪ್ರತಿಷ್ಠೆಯ ಭಾವನೆ? ಇದೊಂದು ಭಯಂಕರ ಸಾಂಕ್ರಾಮಿಕ ವ್ಯಾದಿ. ಇಂಗ್ಲಿಷ್ ಅನ್ನದ ಭಾಷೆ ಎಂದು ಕೆಲವರ ಅನಿಸಿಕೆ. ಯಾವ ಅನ್ಯಭಾಷೆಯೂ ಅನ್ನದ ಭಾಷೆಯಾಗಲಾರದು; ಆಗಬಾರದು. ಇಷ್ಟಕ್ಕೂ ಅನ್ನಕ್ಕಿಂತ ಸತ್ವಪೂರ್ಣ ಮತ್ತು ಸತ್ತ್ವದಾಯಕವಾದದ್ದು ರಾಗಿ ಮತ್ತು ಜೋಳ!
ಇಂಗ್ಲಿಷಿನಲ್ಲಿ ಕಲಿತರೆ ಶ್ರೀಮಂತರಾಗಿಬಿಡಬಹುದೆಂಬ ಭ್ರಾಂತಿ ಹಲವರದು. ಆದರೆ ಎಲ್ಲರೂ ಹಾಗಾಗುವುದು ಸಾಧ್ಯವಿಲ್ಲ. ಇಂಗ್ಲೆಂಡ್, ಅಮೆರಿಕಗಳಲ್ಲೂ ಬಡತನವಿದೆ; ಅಮೆರಿಕದಲ್ಲೂ ಭಿಕ್ಷುಕರಿದ್ದಾರೆ, ಬಹಳ ಮಂದಿಗೆ ಸ್ವಂತ ಮನೆಯಿಲ್ಲ. ಅಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿ ವಾಲ್‌ಸ್ಟ್ರೀಟ್ ಮುತ್ತಿಗೆ.
ಪ್ರೌಢಶಿಕ್ಷಣದ ಹಂತದವರೆಗೆ ಕನ್ನಡವೆ ಮಾಧ್ಯಮವಾಗಬೇಕೆಂದು ಹೇಳುತ್ತಿದ್ದೇವೆ. ಅದು ಉನ್ನತ ಶಿಕ್ಷಣದ ಹಂತದಲ್ಲೂ ಮಾಧ್ಯಮವಾಗಬೇಕು ಎಂಬುದು ಪ್ರಮುಖ ವಿಚಾರ. ವಿಜ್ಞಾನವನ್ನೂ ಕನ್ನಡದಲ್ಲಿ ಬೋಧಿಸಬಹುದು. ಪಾರಿಭಾಷಿಕ ಶಬ್ದಗಳ ಸಮಸ್ಯೆ ಸಮಸ್ಯೆಯೇ ಅಲ್ಲ. ಅನಿವಾರ‍್ಯವಾದಾಗ ಮೂಲಶಬ್ದಗಳನ್ನು ಯಥಾವತ್ತಾಗಿ ಬಳಸಬಹುದು. ಇಷ್ಟಕ್ಕೂ, ವಿಜ್ಞಾನದಲ್ಲಿ ಅಂಕಿಅಂಶಗಳು ಮುಖ್ಯವೇ ಹೊರತು ಭಾಷೆಯಲ್ಲ ಎನ್ನುತ್ತಾರೆ ಲೋಹಿಯಾ. ಹಿಂದೆ ಹೈದರಾಬಾದಿನ ನಿಜಾಮರ ಆಡಳಿತದಲ್ಲಿ ವೈದ್ಯಕೀಯ ಮುಂತಾದುವನ್ನು ಉರ್ದು ಮಾಧ್ಯಮದಲ್ಲಿ ಕಲಿಸಲಾಗುತ್ತಿತ್ತು ಎಂಬುದನ್ನು ನೆನೆಯಬೇಕು. ಈಗಲೂ ತಮಿಳ್ನಾಡಿನಲ್ಲಿ ಎಂಜಿನಿಯರಿಂಗ್ ವಿಷಯವನ್ನು ತಮಿಳಿನಲ್ಲಿ ಬೋಧಿಸಲಾಗುತ್ತಿದೆಯಂತೆ. ವೈದ್ಯಕೀಯ ಪಾರಿಭಾಷಿಕ ಪದಗಳು ಮೂಲತಃ ಇಂಗ್ಲಿಷ್ ಅಲ್ಲ, ಗ್ರೀಕ್ ಮತ್ತು ಲ್ಯಾಟಿನ್ ಎಂಬುದನ್ನು ಗಮನಿಸಬೇಕು. ನಮ್ಮ ವಚನಕಾರರು ಇಂದ್ರಿಯಾತೀತ ಅನುಭವಗಳನ್ನು ಅಥವಾ ಅನುಭಾವವನ್ನು ಅಚ್ಚಗನ್ನಡದಲ್ಲಿ ಅಭಿವ್ಯಕ್ತಿಸಿದರು; ಅಂಗೈ ನೆಲ್ಲಿ ಮಾಡಿಕೊಟ್ಟರು. ಇನ್ನು, ಇಂದ್ರಿಯಗಮ್ಯ ವಿಷಯಗಳನ್ನು ಕನ್ನಡದಲ್ಲಿ ತಿಳಿಸುವುದು ಅಸಾಧ್ಯ ಅಥವಾ ಕಷ್ಟವಾಗುತ್ತದೆಯೆ?
ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ತಕ್ಕ ಪಠ್ಯಗ್ರಂಥಗಳನ್ನು ಕನ್ನಡದಲ್ಲಿ ಸಿದ್ಧಗೊಳಿಸಬೇಕು. ಕನ್ನಡ ಅವುಗಳಲ್ಲೊಂದು ವಿಷಯವಾಗಬೇಕು. ಆದರೆ ಒಂದಂಶವನ್ನು ನೆನಪಿಡಬೇಕು, ಮೂಲ ಶಬ್ದಗಳನ್ನು ಕನ್ನಡಕ್ಕೆ ಅನುವಾದಿಸುವ ಭರದಲ್ಲಿ ‘ಪೆಡಂಭೂತ’ಗಳನ್ನು ಸೃಷ್ಟಿಸತಕ್ಕದ್ದಲ್ಲ. ಆಡಳಿತ ಭಾಷೆಯ ಬಗೆಗೂ ಈ ಮಾತು ಸತ್ಯ. ಅನಿವಾರ‍್ಯವಾದ ಮತ್ತು ಕೆಲವೊಮ್ಮೆ ಸರಳವಾದ ಪಾರಿಭಾಷಿಕ ಪದಗಳನ್ನು ಹಾಗೆಯೆ ಇಟ್ಟುಕೊಳ್ಳಬಹುದು. ಇಂಗ್ಲಿಷ್ ಹಲವಾರು ಭಾಷೆಗಳಿಂದ ಶಬ್ದಗಳನ್ನು ಹೀರಿಕೊಂಡು ಬೆಳೆದಿದೆ. ಜ್ಞಾನ, ವಿಜ್ಞಾನ, ಪ್ರಜ್ಞಾನಗಳ ಭಾಷೆಯಾಗಬೇಕು, ಕನ್ನಡ. ‘ಕಲಾ’ ಸಾಹಿತ್ಯವೇನೊ ಸಾಕಷ್ಟಿದೆ; ಆದರೆ ಶಾಸ್ತ್ರಸಾಹಿತ್ಯ, ವಿಜ್ಞಾನವಾಙ್ಮಯ ಕಡಿಮೆ. ಈ ಸಂಬಂಧವಾಗಿ 'ನ ಬೈಷಾ ಭಾಷಾ ಶಾಸ್ತ್ರಾನುಪಯೋಗಿನೀ' (ಈ ಭಾಷೆ ಶಾಸ್ತ್ರಕ್ಕೆ ಅನುಪಯುಕ್ತವಲ್ಲ) ಎಂಬ ಭಟ್ಟಾಕಳಂಕನ ಉಕ್ತಿ ಸ್ಮರಣೀಯ. ವಿಜ್ಞಾನಸಾಹಿತ್ಯವನ್ನು ಬೆಳೆಸಬೇಕು. ಈ ಬಗೆಗೆ ತೃಪ್ತಿಕರವಾದ ಪ್ರಯತ್ನಗಳು ನಡೆಯುತ್ತಿವೆ; ಸಾಧನೆಯೂ ಸಣ್ಣದಲ್ಲ.
ಕಂಪ್ಯೂಟರ್ ಮತ್ತು ತಂತ್ರಜ್ಞಾನಗಳಲ್ಲಿ (ತಂತ್ರಾಂಶ ಇತ್ಯಾದಿ) ಕನ್ನಡ ಬಳಕೆಗೊಳ್ಳಬೇಕು. ಕನ್ನಡ ಹಿಂದನ್ನು ಮರೆಯದೆ ಇಂದಿಗೆ ಹೊಂದಿಕೊಳ್ಳಬೇಕು; ಹೊಸ ಕಾಲಕ್ಕೆ ಸ್ಪಂದಿಸಬೇಕು. ಈಗ ತಾಂತ್ರಿಕ ಶಿಕ್ಷಣಕ್ಕೇ ಪ್ರಾಧಾನ್ಯ ಕೊಡಲಾಗುತ್ತಿದೆ. ಸಾಮಾನ್ಯ ಶಿಕ್ಷಣಕ್ಕೂ ಪುರಸ್ಕಾರ ಸಲ್ಲಬೇಕು.
ಆಡಳಿತದಲ್ಲಿ ಕನ್ನಡ ಇನ್ನೂ ಸಂಪೂರ್ಣವಾಗಿ ನೆಲೆಗೊಂಡಿಲ್ಲ. ನಮ್ಮ ಬಹುಮಂದಿ ಅಧಿಕಾರಿಗಳಿಗೆ ಈ ಬಗ್ಗೆ ನಿರಾಸಕ್ತಿ. ಹಾಗೆ ನೋಡಿದರೆ, ಬ್ರಿಟಿಷರ ಕಾಲದಲ್ಲೆ ಕನ್ನಡ ತಕ್ಕಮಟ್ಟಿಗೆ ಆಡಳಿತ ಭಾಷೆಯಾಗಿತ್ತು; ಮಹದೇವ ಬಣಕಾರರ ‘ಆಂಗ್ಲರ ಆಡಳಿತದಲ್ಲಿ ಕನ್ನಡ’ ಎಂಬ ಪುಸ್ತಕ, ಈ ದಿಶೆಯಲ್ಲಿ ಬೋಧಪ್ರದವಾಗಿದೆ. ಈ ಹಿನ್ನಡೆ ಆಶ್ಚರ್ಯಕರವಾದದ್ದು. ನ್ಯಾಯಾಲಯದ ಭಾಷೆ ಕನ್ನಡವಾಗಬೇಕು ಎಂಬುದು ಒತ್ತಿ ಹೇಳಬೇಕಾದ ಅಂಶ.
ಕೇಂದ್ರ ಸರ್ಕಾರ ಹಿಂದಿಯನ್ನು ಕನ್ನಡಿಗರ ಮೇಲೆ ಹೇರುವ ಹುನ್ನಾರವನ್ನು ನೇರವಾಗಿಯೊ ಪರೋಕ್ಷವಾಗಿಯೊ ಸ್ಥೂಲವಾಗಿಯೊ ಸೂಕ್ಷ್ಮವಾಗಿಯೊ ಮಾಡುತ್ತಿದೆ. ಅದನ್ನು ಪ್ರತಿಭಟಿಸಿ ತಪ್ಪಿಸಬೇಕು. ಹಿಂದಿ ರಾಷ್ಟ್ರಭಾಷೆ ಎಂಬುದು ತಪ್ಪು; ಅದೊಂದು ಸಂಪರ್ಕಭಾಷೆಯಾಗಿ ಕೆಲಸ ಮಾಡಬಹುದು. ವಾಸ್ತವವಾಗಿ ಎಲ್ಲ ಭಾಷೆಗಳೂ ರಾಷ್ಟ್ರಭಾಷೆಗಳೇ. ಕರ್ನಾಟಕದಲ್ಲಿರುವ ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಕನ್ನಡ ಬಳಕೆಗೊಳ್ಳಬೇಕು. ಇಂಗ್ಲಿಷಿಗಿಂತ ಹಿಂದಿ ಅಪಾಯಕಾರಿ ಎಂಬುದನ್ನು ಕುವೆಂಪು ಒಂದು ಹೋಲಿಕೆಯ ಮೂಲಕ ಒಮ್ಮೆ ಪ್ರತಿಪಾದಿಸಿದರು: 'ಇಂಗ್ಲಿಷ್ ಮರದ ದೊಣ್ಣೆಯಾದರೆ ಹಿಂದಿ ಕಬ್ಬಿಣದ ದೊಣ್ಣೆ!'
ಇಂಗ್ಲಿಷ್ ಬಹುಮಟ್ಟಿಗೆ ಈ ಹೊತ್ತು ಉದ್ಯೋಗದ ಭಾಷೆಯೂ ಆಗಿರುವುದರಿಂದ ಅದನ್ನು ಕುರಿತ ಮೋಹವನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೇ ಉದ್ಯೋಗ, ಅಥವಾ ಉದ್ಯೋಗದಲ್ಲಿ ಆದ್ಯತೆ ಎಂಬ ಬಿಗಿನೀತಿಯನ್ನು ಸರ್ಕಾರ ರೂಪಿಸಿಕೊಂಡರೆ, ಸಮಸ್ಯೆ ಬಹುತೇಕ ಬಗೆಹರಿಯುತ್ತದೆ; ಪರಿಸ್ಥಿತಿ ಖಂಡಿತ ಸುಧಾರಿಸುತ್ತದೆ, ಮೂಗು ಬಿಗಿಹಿಡಿದರೆ ಬಾಯಿ ತಾನಾಗಿಯೆ ತೆರೆಯುವಂತೆ! ಅಂದಹಾಗೆ, ಸರೋಜಿನಿ ಮಹಿಷಿ ವರದಿ ಕೂಡಲೆ ಜಾರಿಗೆ ಬರಬೇಕು.
'ಎಲ್ಲಾದರು ಇರು, ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು!' ಎಂದು ಕುವೆಂಪು ಸಾಂಸ್ಕೃತಿಕ ಕರ್ಣಾಟಕದ ಪರಿಕಲ್ಪನೆಯನ್ನು ಕೊಟ್ಟರು. ಅದು ಒಂದರ್ಥದಲ್ಲಿ ಸರಿ. ಆದರೆ ಭೌಗೋಳಿಕ ಕರ್ಣಾಟಕವೂ ಮುಖ್ಯ ಎಂಬುದನ್ನು ನಾವು ಮನಗಾಣಬೇಕು. ಈಗ ಕರ್ನಾಟಕದ ಹೊರಗಿರುವ ಎಷ್ಟೋ ಪ್ರದೇಶಗಳು ಕರ್ಣಾಟಕದ ತೆಕ್ಕೆಗೆ ಬರಬೇಕು. ಬೆಳಗಾವಿಯಂತೂ ಎಂದೆಂದಿಗೂ, ನಿಸ್ಸಂದಿಗ್ಧವಾಗಿ ಕರ್ಣಾಟಕದ ಅವಿಭಾಜ್ಯವಾದ ಮತ್ತು ಅನಿವಾರ‍್ಯವಾದ ಅಂಗ. ಅದನ್ನು ಕಬಳಿಸಬೇಕು ಎಂಬ ಎಂ.ಇ.ಎಸ್.ನ ದುರುದ್ದೇಶವನ್ನು ವಿಫಲಗೊಳಿಸಬೇಕು; ಮರಾಠಿಗರ ಪುಂಡಾಟಿಕೆಯನ್ನು ಅಡಗಿಸಬೇಕು; ಭಂಡತನಕ್ಕೆ ಕಡಿವಾಣ ಹಾಕಬೇಕು. ಎಂ.ಇ.ಎಸ್.ನವರು ಬೆಳಗಾವಿಯ ಮೇಯರ್, ಉಪಮೇಯರ್ ಆಗುವುದೆಂದರೆ ಏನರ್ಥ? ಸರ್ಕಾರ ಅಲ್ಲಿನ ಕನ್ನಡಿಗರ ಸಮಸ್ಯೆಗಳನ್ನು ಅರಿತು, ಪರಿಹರಿಸುವುದೂ ಅವಶ್ಯ. ಗಡಿಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಹರಿಸಬೇಕು; ಗಡಿನಾಡು ದೃಢವಾಗಬೇಕು. ಹಾಗೆ ನೋಡಿದರೆ ಒಳನಾಡಿನಲ್ಲಿ ತಾನೆ ಏನು ಅಭಿವೃದ್ಧಿ ಕಾರ‍್ಯಗಳಾಗಿವೆ? ಹಲವೆಡೆ ರಸ್ತೆಗಳೇ ಇಲ್ಲ. ಇನ್ನು ಹಲವು ರಸ್ತೆಗಳಲ್ಲಿ ಹೊಂಡಗಳು ಆಕಳಿಸುತ್ತಿವೆ. ಅವು ನಮ್ಮ ಜೀವನಪಥದ ಹಳ್ಳ, ಹೊಂಡಗಳನ್ನೂ ಸಂಕೇತಿಸಬಹುದು!
ಕನ್ನಡ ಸಾಹಿತ್ಯ ಈಚೆಗೆ ದಾಪುಗಾಲು ಹಾಕುತ್ತ ಮುಂದುವರಿಯುತ್ತಿದೆ. ದಲಿತ ಸಾಹಿತ್ಯ ಬಲಿತ ಸಾಹಿತ್ಯವಾಗುತ್ತಿದೆ. ‘ಅಡುಗೆ ಮನೆ ಸಾಹಿತ್ಯ’ ಎನಿಸಿದ್ದ ಮಹಿಳಾ ಸಾಹಿತ್ಯ ಈಗ ಕಡೆಯಪಕ್ಷ ನಡುಮನೆಗೆ ಬಂದಿದೆ. ಮಹಿಳೆ ಹೊಸಿಲು ದಾಟುವುದೀಗ ನಿಂದ್ಯವಾಗದೆ, ಸೀಮೋಲ್ಲಂಘನವಾಗಿದೆ. ಆದರೂ ಹೊಸ ಲೇಖಕರಿಗೆ ಪರಂಪರೆಯ ಪ್ರಜ್ಞೆ ಕಡಿಮೆ, ಭಾಷೆಯ ಮೇಲೆ ಹಿಡಿತ ಸಾಲದು. ಅನುಭವದ ಮೂಲದ್ರವ್ಯದ ಹಾಗೂ ಅದನ್ನು ಕಲೆಯಾಗಿಸುವ ಕೌಶಲದ ಕೊರತೆಯಿದೆ ಎನ್ನಬೇಕು. ಸಾಹಿತ್ಯ ಉತ್ತಮವಾದರೆ ಸಾಕೆ? ಸಾಹಿತಿಗಳ ಬದುಕೂ ದೊಡ್ಡದಾಗಬೇಕು. 
ಕೆಲವು ದಿನಗಳ ಹಿಂದೆ ಖ್ಯಾತ ಲೇಖಕರೊಬ್ಬರು ಹೇಳಿದ್ದಾರೆ: 'ಸಾಹಿತ್ಯವೆಂಬ ಮೌಲ್ಯವನ್ನು ಬೇರೆ ಮೌಲ್ಯಗಳಿಗೆ ಅಡಿಯಾಳಾಗಿ ದುಡಿಸಹೊರಟರೆ ಸಾಹಿತ್ಯವು ಸಾಹಿತ್ಯವಾಗಿ ಉಳಿಯುವುದಿಲ್ಲ. ಅಲ್ಲದೆ ಅದು ಪ್ರಚಾರಸಾಹಿತ್ಯವಾಗಿ ತೀರ ಅಲ್ಪಾಯುಷಿಯಾಗುತ್ತದೆ.' ಇದು ಪ್ರಶ್ನಿಸಬೇಕಾದ ಮಾತು. ಶುದ್ಧ ಸಾಹಿತ್ಯಮೌಲ್ಯ ಎಂಬುದುಂಟೆ? ಇತರ ಮೌಲ್ಯಗಳನ್ನೂ ಒಳಗೊಂಡ ಸಂಕೀರ್ಣ ಮೌಲ್ಯವಲ್ಲವೆ, ಸಾಹಿತ್ಯ? 'ಕಲೆ ಕ್ರಿಯೆಯೂ ಹೌದು' (art is act as well) ಎಂಬ ಸಾರ್ತ್ರೆಯ ನಿಲುವು ಸಮತೂಕದ್ದು. ಈ ದಿಶೆಯಲ್ಲಿ ವಚನಸಾಹಿತ್ಯದಿಂದ ಕುವೆಂಪು ಅಂಥವರ ಸಾಹಿತ್ಯದಿಂದ ಕಲಿಯಬೇಕಾದ ಪಾಠಗಳಿವೆ.
ಮಹಾಕಾವ್ಯಗಳ ಕಾಲ ಮುಗಿದುಹೋಯಿತು ಎಂಬ ವಾದ ಪಶ್ಚಿಮದಲ್ಲಿರುವಾಗ, ಅಲ್ಲಿ ಒಂದೂ ಆಧುನಿಕ ಮಹಾಕಾವ್ಯ ಹುಟ್ಟದಿರುವಾಗ, ಕನ್ನಡದಲ್ಲಿ ‘ಶ್ರೀರಾಮಾಯಣ ದರ್ಶನ’ದ ತರುವಾಯ ಸುಮಾರು ಐವತ್ತು ಮಹಾಕಾವ್ಯಗಳು ಹುಟ್ಟಿರುವುದೊಂದು ವಿಸ್ಮಯಕರ ವಿದ್ಯಮಾನ. ಒಂದು ಕಡೆ ‘ಮುಕ್ತಕ’, ಇನ್ನೊಂದು ಕಡೆ ಮಹಾಕಾವ್ಯ - ಇದು ಸ್ವಾರಸ್ಯಕರ ದ್ವಂದ್ವ. ಈಚೆಗೆ ಮೂರು ಸಾಹಿತ್ಯ ಪ್ರಕಾರಗಳು ಹುಟ್ಟಿ ಬೆಳೆಯುತ್ತಿವೆ: ಚುಟುಕು ಅಥವಾ ಹನಿಗವನ, ಮುಕ್ತಕ ಮತ್ತು (ಆಧುನಿಕ) ವಚನ. ಇವುಗಳಲ್ಲಿ ಹನಿಗವನ ಕಾವ್ಯಪ್ರಜ್ಞೆಯನ್ನು ಸಾರ್ವತ್ರೀಕರಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ. ಅದೂ ಕಾವ್ಯವೇ ಎಂಬುದನ್ನು ನಾವು ನೆನಪಿಡಬೇಕು. ಸಾಲುಗಳ ಸಂಖ್ಯೆ ಕವಿತೆಯ ಅಳತೆಗೋಲಲ್ಲ. ಕವಿತೆಯೊಂದು, ನಾಮ ಹಲವು!
ಕನ್ನಡದಲ್ಲೀಗ ಪ್ರತಿವರ್ಷ ಸಾವಿರಾರು, ಎಂದರೆ ಹತ್ತಿರ ಹತ್ತಿರ ಆರು ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಹೊರಗಿನ ಅಂದಚಂದಗಳಲ್ಲಿ ಅವು ಯಾವುದೇ ಭಾಷೆಯ ಪುಸ್ತಕಗಳನ್ನು ಸರಿಗಟ್ಟುತ್ತವೆ ಎಂಬುದು ಸಂತಸದ ಸಂಗತಿ. ವಿಚಾರ ವಿಮರ್ಶೆಗಳಿಗೆ, ಅರ್ಥಾತ್ ಸೃಜನೇತರ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಈಗ ಹೆಚ್ಚಾಗಿ ಓದಿಸಿಕೊಳ್ಳುತ್ತವೆ ಎಂಬುದು ಗಮನಾರ್ಹ. ಆದರೂ ವಚನ ಸಂಸ್ಕೃತಿ, ಪುಸ್ತಕ ಸಂಸ್ಕೃತಿ ಕುಗ್ಗುತ್ತಿದೆ ಎಂದು ಹೇಳಬೇಕು. ಅದನ್ನು ನಾವು ಉಳಿಸಿಕೊಳ್ಳಬೇಕು. ಪ್ರಾಚೀನ ಸಾಹಿತ್ಯವನ್ನಂತೂ ಈಗ ಕೇಳುವವರು ಯಾರು? ಹಳೆಯ ಕಾವ್ಯಗಳನ್ನು ಗದ್ಯಾನುವಾದದಲ್ಲಾದರೂ ಜನ ಓದಬೇಕು.
ಸಾಹಿತ್ಯ ಸಮ್ಮೇಳನಗಳಲ್ಲಿ ಸ್ತ್ರೀಯರಿಗೆ ಮತ್ತು ದಲಿತರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸುವುದು ಅಗತ್ಯ. 'ನೊಂದ ನೋವ ನೋಯದವರೆತ್ತ ಬಲ್ಲರು?' ಎಂದು ಕೇಳಿದಳು, ಅಕ್ಕ. 'ಕಾವಿನಿಂದ ಕಾವ್ಯ!' ಎಂದರು ಎ.ಆರ್.ಕೃ. ಮಹಿಳೆಯರ ಮತ್ತು ದಲಿತರ ನೋವು, ಕಾವುಗಳು ಮುಕ್ತವಾಗಿ ಅಭಿವ್ಯಕ್ತವಾಗಬೇಕು. ಜನಜೀವನದಲ್ಲಿ ಇಂದಿಗೂ ಮನೆಮಾಡಿರುವ ಮಡೆಸ್ನಾನದಂಥ ಮೌಢ್ಯವನ್ನು, ಇತರ ಜಾಡ್ಯಗಳನ್ನು ಸಾಹಿತ್ಯ ನಿವಾರಿಸಬೇಕಾಗಿದೆ. ('ನಿಶ್ಶೇಷ ಜಾಡ್ಯಾಪಹಾ' ಎಂಬ ವಿಶೇಷಣ ಸಾರ್ಥಕವಾಗಬೇಕಲ್ಲವೆ?) ವೈಜ್ಞಾನಿಕ ದೃಷ್ಟಿಯನ್ನು ಅದು ಬೆಳೆಸಬೇಕಾಗಿದೆ. ಅದು ನಮ್ಮ ಸಂವಿಧಾನದ ಒಂದು ಆಶಯ ಕೂಡ. ಹಾಗೆ ನೋಡಿದರೆ, ಶ್ರೇಷ್ಠವಾದ ನಮ್ಮ ಸಂವಿಧಾನ ಎಲ್ಲ ವಿಷಯಗಳಲ್ಲೂ ತಾರಕವಾಗಬೇಕು. ಸ್ತ್ರೀಯರ ಮತ್ತು ದಲಿತರ ಮೇಲಿನ ದೌರ್ಜನ್ಯಕ್ಕೂ ಕುಠಾರವಾಗಬೇಕು, ಸಾಹಿತ್ಯ.
ಭಾಷೆ, ಸಾಹಿತ್ಯಗಳ ಬೆಳವಣಿಗೆಗೆ ನಮ್ಮ ಪತ್ರಿಕೆಗಳು ನೀಡುತ್ತಿರುವ ಕೊಡುಗೆ ಗಣ್ಯವಾದುದು. ಆದರೆ ಸುದ್ದಿಗಳಿಗೆ ಸಂಬಂಧಿಸಿದಂತೆ ಅವು ಇನ್ನಷ್ಟು ವಸ್ತುನಿಷ್ಠವಾಗಬೇಕಾಗಿದೆ. ದೂರದರ್ಶನಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ಬಳಕೆಗೊಳ್ಳುತ್ತಿರುವ ಕೆಟ್ಟ ಕನ್ನಡ ಮತ್ತು ಅನಗತ್ಯ ಇಂಗ್ಲಿಷ್ ಅಸಹನೀಯ. ಅದನ್ನು ಸಹ್ಯಗೊಳಿಸಬೇಕು. ಕೆಲವು ವಾಹಿನಿಗಳು ಮೌಢ್ಯ ಪ್ರಸಾರ ಮಾಧ್ಯಮಗಳಾಗಿರುವುದು ಶೋಚನೀಯ. ಕನ್ನಡ ಅಳಿಯದೆ ಮುಂದೆ ಉಳಿಯಬಹುದು, ಆದರೆ ಭ್ರಷ್ಟ ಕನ್ನಡವಾಗಿ! ಕನ್ನಡದ ಕೊಲೆ ಇಂಗ್ಲಿಷಿನಿಂದ ಮಾತ್ರವಲ್ಲ, ಕನ್ನಡಿಗರಿಂದಲೇ! ವಿದ್ಯುನ್ಮಾನ ಮಾಧ್ಯಮಗಳು ಯುವಜನತೆಯ ಮತ್ತು ಮಕ್ಕಳ ಅಭಿರುಚಿಯನ್ನು ಕೆಡಿಸುತ್ತಿವೆ. ಅವಕ್ಕೊಂದು ‘ಸೆನ್ಸಾರ್’ ಅತ್ಯಗತ್ಯ. ಆದರೆ ಕೆಲವೊಮ್ಮೆ ಉಪಯುಕ್ತವಾದ, ನಾವೇ ಮನೆಗೆ ತಂದು ಸೇರಿಸಿಕೊಂಡಿರುವ ದೂರದರ್ಶನದ ಮಾರಿಯನ್ನು ದೂರೀಕರಿಸುವುದೆಂತು?
ಪರಂಪರಾಗತ ವಿದ್ವತ್ತಿಗೆ ಅಧಿಕ ಅವಕಾಶವಿದ್ದ ಪಂಡಿತ ತರಗತಿಗಳೂ ಹಾಗೆಯೇ ವಯಸ್ಕರ ಶಿಕ್ಷಣ ಸಮಿತಿಯೂ ಈಗ ಸ್ಥಗಿತವಾಗಿವೆ. ಅವುಗಳನ್ನು ಪುನರುಜ್ಜೀವಿಸಬೇಕು. ಕರ್ನಾಟಕದೊಳಗೆ ಪತ್ರವ್ಯವಹಾರ ಇತ್ಯಾದಿ ವ್ಯವಹಾರ ಕನ್ನಡದಲ್ಲೇ ಜರುಗಬೇಕು; ಮಾತುಕತೆಯೂ ಅಷ್ಟೆ. ಕರ್ನಾಟಕದಲ್ಲಿ ಎಲ್ಲ ನಾಮಫಲಕಗಳು ಪ್ರಮುಖವಾಗಿ ಕನ್ನಡದಲ್ಲಿರಬೇಕು. ಕನ್ನಡ ಅಂಕಿಗಳು ಎಲ್ಲೆಡೆ ಬಳಕೆಗೊಳ್ಳಬೇಕು. ಪತ್ರಿಕೆಗಳೂ ಇತ್ತ ಗಮನ ಹರಿಸಬೇಕು. ‘ನಲಿ ಕಲಿ’ ಎಂಬ ಪಠ್ಯಪುಸ್ತಕ ಅವೈಜ್ಞಾನಿಕವೆಂದು ಹಲವರ ಅಭಿಪ್ರಾಯ. ಅದನ್ನು ರದ್ದುಗೊಳಿಸಬಾರದೇಕೆ? ಪ್ರಚಾರದ ಕೊರತೆಯಿಂದ ಕನ್ನಡಕ್ಕೆ ಆಗಿರುವಷ್ಟು ಅನ್ಯಾಯ ಮತ್ತಾವ ಭಾಷೆಗೂ ಆಗಿಲ್ಲ ಎಂದು ಒಂದೆಡೆ ಹೇಳಿದ್ದಾರೆ, ಕುವೆಂಪು. ಕನ್ನಡದ ಹಿರಿಮೆ ಗರಿಮೆಗಳನ್ನು ನಾವು ಹೊರಜಗತ್ತಿಗೆ ಪರಿಚಯಿಸಬೇಕು; ಬೇರೆ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಕನ್ನಡ ಪೀಠಗಳನ್ನು ಸರ್ಕಾರ ಸ್ಥಾಪಿಸಬೇಕು. ಈಗ ಅಲ್ಲಲ್ಲಿ ಇರುವ ಪೀಠಗಳನ್ನು ಬಲಪಡಿಸಬೇಕು.
ಭಾಷಾಂತರ ‘ಅಲಕ್ಷಿತ ಕಲೆ’ (neglected art)ಎನಿಸಿಕೊಂಡಿದ್ದರೂ ಅದರ ಪಾತ್ರ ಈ ಹೊತ್ತು ಭಾಷೆ, ಸಾಹಿತ್ಯಗಳ ಅಭಿವೃದ್ಧಿಯಲ್ಲಿ, ಜ್ಞಾನದ ಬೆಳವಣಿಗೆಯಲ್ಲಿ ಮಹತ್ವದ್ದು. ಅನ್ಯಭಾಷೆಗಳಿಂದ, ಅದರಲ್ಲೂ ಇಂಗ್ಲಿಷಿನಿಂದ ಪುಸ್ತಕಗಳು ಕನ್ನಡಕ್ಕೆ ಭಾಷಾಂತರಗೊಳ್ಳುತ್ತಿವೆ; ಆದರೆ ಕನ್ನಡದಿಂದ ಬೇರೆ ಭಾಷೆಗಳಿಗೆ ತರ್ಜುಮೆಯಾಗುತ್ತಿಲ್ಲ. ಈ ಏಕಮುಖ ಸಂಚಾರ ದ್ವಿಮುಖ, ಬಹುಮುಖ ಸಂಚಾರವಾಗಬೇಕು. ಭಾಷಾಂತರಕಾರರ ಒಂದು ಪಡೆಯೆ ಸಿದ್ಧವಾಗಬೇಕಿದೆ. ಭಾಷಾಂತರ ಕಾರ‍್ಯ ಒಂದು ಬಗೆಯ ದಿಗ್ವಿಜಯ. ಈಚೆಗೆ ಸ್ಥಾಪನೆಗೊಂಡಿರುವ ಕುವೆಂಪು ಭಾಷಾಭಾರತಿ ಪ್ರಾಧಿಕಾರ ಈ ದಿಕ್ಕಿನಲ್ಲಿ ಸ್ತುತ್ಯವಾದ ಕಾರ‍್ಯ ಮಾಡುತ್ತಿದೆ. ಆದರೂ ಆಗಬೇಕಾದ ಕೆಲಸ ಅಗಾಧವಾಗಿದೆ.
ಕನ್ನಡ ಚಳುವಳಿಗಳ, ಹೋರಾಟಗಳ ಬಗೆಗೆ ಇಲ್ಲಿ ಒಂದು ಮಾತು ಹೇಳಲೇಬೇಕು. ಕನ್ನಡವನ್ನು ಉಳಿಸುವಲ್ಲಿ ಈ ಚಳುವಳಿಗಳು ಗಣ್ಯ ಪಾತ್ರ ವಹಿಸಿವೆ. ಆದರೆ ಕನ್ನಡ ಚಳುವಳಿಗಾರರು ರಾಜಕೀಯ ಪಕ್ಷಗಳಂತೆ ಬೇರೆ ಬೇರೆ ಗುಂಪುಗಳಾಗಿರುವುದು ಅಪೇಕ್ಷಣೀಯವಲ್ಲ; ಅದರಿಂದ ಚಳುವಳಿಗಳು ದುರ್ಬಲವಾಗುತ್ತವೆ. ಚಳುವಳಿಗಾರರೆಲ್ಲ ಒಂದು ಸಂಘಟನೆಯಾಗಿ ಕೆಲಸ ಮಾಡಿದರೆ ಹೆಚ್ಚು ಫಲಪ್ರದವಾಗುವುದರಲ್ಲಿ ಸಂಶಯವಿಲ್ಲ.
ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳ ಪಾತ್ರವೇನು ಎಂಬುದೊಂದು ಪ್ರಶ್ನೆ. ಅವರೂ ಕನ್ನಡಿಗರೇ; ಸಾಹಿತ್ಯ, ಸಂಸ್ಕೃತಿಗಳಲ್ಲಿ ಆಸಕ್ತರಾದವರು ಅವರಲ್ಲಿ ಇರಬಾರದೆಂದಿಲ್ಲ. ಅಲ್ಲದೆ, ಸಾಹಿತ್ಯ ಎಲ್ಲರಿಗಾಗಿ. ಆದರೂ ಕನ್ನಡ ಸಾಹಿತ್ಯ ಪರಿಷತ್ತು ಸ್ವಂತ ಸಂಪನ್ಮೂಲಗಳನ್ನು ರೂಢಿಸಿಕೊಂಡು ಸಂಪೂರ್ಣ ಸ್ವಾವಲಂಬಿಯಾದಾಗ, ಸರ್ಕಾರದ ಹಂಗನ್ನು ಹರಿದುಕೊಂಡಾಗ, ರಾಜಕಾರಣಿಗಳ ಮೆರೆತವನ್ನು ತಪ್ಪಿಸಬಹುದು. ಮರಾಠಿ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳು ಮಾತ್ರ ವೇದಿಕೆಯನ್ನು ಅಲಂಕರಿಸುತ್ತಾರೆ, ರಾಜಕಾರಣಿಗಳು ಕೆಳಗೆ ಕುಳಿತುಕೊಳ್ಳುತ್ತಾರೆ ಎಂಬುದು ಕುತೂಹಲಕಾರಿ ಸಂಗತಿ.
ನಾಡಗೀತೆಯ ಬಗೆಗಿರುವ ಚರ್ಚೆಯನ್ನೂ ಇಲ್ಲಿ ಪರಿಗಣಿಸಬಹುದು. ನಾಡಗೀತೆಯನ್ನು ಸಂಕ್ಷೇಪಿಸತಕ್ಕದ್ದಲ್ಲ. ಆದಷ್ಟು ಬೇಗ ಅದನ್ನು ಹಾಡಿ ಮುಗಿಸಬೇಕು. ಎದ್ದು ನಿಲ್ಲಲಾರದವರು ಅಥವಾ ಹೆಚ್ಚು ಹೊತ್ತು ನಿಲ್ಲಲಾರದವರು ಕುಳಿತೇ ಅದಕ್ಕೆ ಗೌರವ ಸಲ್ಲಿಸಬಹುದು. ನಾಡಾಗಲಿ ನಾಡಗೀತೆಯಾಗಲಿ ಛಿದ್ರವಾಗಕೂಡದು!
ಈಗ ಶಿಕ್ಷಣದ ವ್ಯಾಪಾರೀಕರಣವನ್ನು ಕಾಣುತ್ತಿದ್ದೇವೆ; ಅದೊಂದು ಉದ್ಯಮವಾಗಿ ಪರಿಣಮಿಸಿದೆ. ವಾಣಿಯ ವಾಣಿಜ್ಯೀಕರಣವನ್ನು ತಡೆಗಟ್ಟಬೇಕಿದೆ. ಒಟ್ಟಿನಲ್ಲಿ ನಮ್ಮ ಇಡೀ ಶಿಕ್ಷಣಪದ್ಧತಿಯೆ ದೋಷಪೂರ್ಣವಾಗಿದ್ದು, ಸುಧಾರಣೆಯನ್ನು ಬಯಸುತ್ತಿದೆ. ಶಿಕ್ಷಣವೆಂದರೆ ಕೇವಲ ಮಾಹಿತಿಯಲ್ಲ, ಜ್ಞಾನ; ಕೇವಲ ಜ್ಞಾನವೂ ಅಲ್ಲ, ವಿವೇಕ(wisdom) 'ವಿವೇಕವಿಲ್ಲದಿದ್ದರೆ, ಜ್ಞಾನ ಹೆಚ್ಚಿದಷ್ಟೂ ದುಃಖವೂ ಹೆಚ್ಚುತ್ತದೆ!' ಎಂಬುದು ಬರ್ಟ್ರಂಡ್ ರಸೆಲ್ ಅವರ ಉಕ್ತಿ. 'ವಿವೇಕಿಗಳ್ ಆ ನಾಡವರ್ಗಳ್' ಎಂದು ನಮ್ಮ ಕವಿರಾಜಮಾರ್ಗಕಾರ ಇದನ್ನು ಹಿಂದೆಯೆ ಸೂಚಿಸಿದ.
ಬದುಕು ಈಗ ಭೋಗಮುಖಿಯಾಗಿದೆ. 'ಹಣವನೊಂದನೆ ಗಳಿಸು, ಫಲವಿಲ್ಲ ಕಲೆಗೆ!' ಎಂಬ ಪ್ರಾಚೀನ ವ್ಯಂಗ್ಯೋಕ್ತಿ ಈಗ ಅಕ್ಷರಶಃ ದಿಟವಾಗಿದೆ. ಅದರಿಂದ ಜೀವನ ಸ್ಥಾವರವಾಗಿದೆ; ಅದನ್ನು ಜಂಗಮಗೊಳಿಸಬೇಕು. ಬಸವಣ್ಣನವರ ಉಕ್ತಿ ಬಹುಸ್ತರಗಳಲ್ಲಿ ತಥ್ಯ; ವಿಶ್ವದ ವಿಚಾರಭಂಡಾರಕ್ಕೆ ಅದೊಂದು ಪ್ರಶಸ್ತವಾದ ಕೊಡುಗೆ.
ನಿಜವಾದ ರಾಜಕೀಯಕ್ಕಿಂತ ‘ಸಾಹಿತ್ಯ ರಾಜಕೀಯ’, ಗುಂಪುಗಾರಿಕೆ ಹೆಚ್ಚು ಅಪಾಯಕಾರಿ. ಅಂತೂ ಯಾರಿಗೆ ಯಾರೂ ಮೇಲ್ಪಂಕ್ತಿಯಾಗದಂಥ ವಿಕಟ ಸನ್ನಿವೇಶದಲ್ಲಿ ನಾವಿದ್ದೇವೆ. ಹಿಂದಕ್ಕೆ ಗುರುವಾಗಲಿ, ಮುಂದಕ್ಕೆ ಗುರಿಯಾಗಲಿ ಇಲ್ಲ! ಇಹದ ಅತಿಭೋಗ ಪ್ರವೃತ್ತಿಯಿಂದಾಗಿ ಈ ಹೊತ್ತು ಧನಪರತೆ ಮೆರೆಯುತ್ತಿದೆಯೆ ಹೊರತು ಜನಪರತೆಯಲ್ಲ. ಮೌಲ್ಯಗಳೆಲ್ಲಿ?
ಸಮ್ಮೇಳನಾಧ್ಯಕ್ಷರು ಕೇವಲ ಉತ್ಸವಮೂರ್ತಿಯಾಗಬೇಕೆ, ಅವರನ್ನು ಮೆರವಣಿಗೆ ಮಾಡಿ ಮನೆಗೆ ಕಳುಹಿಸಬೇಕೆ ಎಂಬುದು ವಿಚಾರಯೋಗ್ಯ. ಅವರಿಗೆ ಕ್ರಿಯಾತ್ಮಕವಾದ ಯಾವುದಾದರೂ ಪಾತ್ರವನ್ನು ಕೊಡುವುದು ಒಳ್ಳೆಯದು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೆಲವೊಂದು ಕರ್ತವ್ಯಗಳನ್ನು, ಅಧಿಕಾರಗಳನ್ನು ಕೂಡ ಸಮ್ಮೇಳನಾಧ್ಯಕ್ಷರಿಗೆ ವಹಿಸಬಾರದೇಕೆ?
ಒಟ್ಟಿನಲ್ಲಿ ಕನ್ನಡದ ಬೇರು ಬುನಾದಿಗಳನ್ನು ಸರ್ವತ್ರ ಸಬಲವಾಗಿಸಬೇಕು. 'ಮನೆಯೆ ಮೊದಲ ಪಾಠಶಾಲೆ' ಎಂಬ ಮಾತು ಕನ್ನಡದ ಮಟ್ಟಿಗೂ ಸತ್ಯ. ಮಕ್ಕಳಿಗೆ ಬಾಲ್ಯದಲ್ಲೆ ಕನ್ನಡದ ದೀಕ್ಷೆ ಕೊಟ್ಟು, ರಕ್ಷೆ ಕಟ್ಟಿ ಅವರಲ್ಲಿ ಪ್ರೀತಿ ಆಸಕ್ತಿಗಳನ್ನು ಮೊಳೆಯಿಸಬೇಕು; ಮುಂದೆ ಉದ್ದಕ್ಕೂ ಬೆಳೆಯಿಸಬೇಕು. ನಮ್ಮ ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು; ಭವಿಷ್ಯಗಾಮಿಯಾಗಿಸಬೇಕು. ಕನ್ನಡ ಮಾಧ್ಯಮದ ಬಗ್ಗೆ ವೇದಿಕೆಗಳ ಮೇಲೆ ಉಜ್ವಲವಾಗಿ ಮಾತನಾಡುವ ಅನೇಕರು ಸ್ವಂತ ಮಕ್ಕಳನ್ನು ಕಾನ್ವೆಂಟುಗಳಿಗೆ ಕಳುಹಿಸುತ್ತಾರೆ ಎಂಬ ಆಕ್ಷೇಪಣೆಯೊಂದಿದೆ. ಅದರಲ್ಲಿ ಅರ್ಥವಿಲ್ಲದಿಲ್ಲ. ಆದರೆ ನಾವು ತಾತ್ತ್ವಿಕವಾಗಿ ಚಿಂತಿಸಬೇಕು. ವ್ಯಕ್ತಿಗಳನ್ನು ಮರೆತು ಶಕ್ತಿಯನ್ನು ಪರಿಭಾವಿಸಬೇಕು.
ಸಂತೋಷಕರವಾದ ಈಚಿನ ಮೂರು ವಿದ್ಯಮಾನಗಳನ್ನು ಇಲ್ಲಿ ಉಲ್ಲೇಖಿಸಬೇಕು. ಮೊದಲನೆಯದಾಗಿ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನಗಳು ಪ್ರಾಪ್ತವಾದರೂ, ಯಾವುದೋ ವಿಘ್ನದಿಂದ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿರಲಿಲ್ಲ; ಈಗ ಮಾಡಿದೆ. ಕನ್ನಡ ಭಾಷೆ ಸಾಹಿತ್ಯಗಳ ಬೆಳವಣಿಗೆಗೆ ತಕ್ಕ ಯೋಜನೆಗಳನ್ನು ರೂಪಿಸಿ, ಆ ದೊಡ್ಡ ಮೊತ್ತದ ಹಣ ಸದ್ವಿನಿಯೋಗವಾಗುವಂತೆ ನೋಡಿಕೊಳ್ಳಬೇಕಾಗಿದೆ. ಈ ವಿಷಯದಲ್ಲಿ ತಮಿಳುನಾಡು ಸರ್ಕಾರ ಏನೇನು ಮಾಡುತ್ತದೆಯೆಂಬುದನ್ನು ಗಮನಿಸುವುದು ಒಳ್ಳೆಯದು.
ಎರಡನೆಯದಾಗಿ, ದ್ವಿತೀಯ ವಿಶ್ವಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ಯಶಸ್ವಿಯಾಗಿ ಜರುಗಿತು. ವಿಶ್ವ ಕನ್ನಡಕ್ಕೆ ಬರಬೇಕು; ಕನ್ನಡ ವಿಶ್ವಕ್ಕೆ ಹೋಗಬೇಕು. ವಿಶ್ವಕನ್ನಡ ವಿನಿಮಯ ಇಂದಿನ ತುರ್ತು ಆವಶ್ಯಕತೆ. 'ವಿಶ್ವಭಾರತಿ ಶರಣು ಕಿರುತೀರ್ಥವಲ್ತು!'
ಮೂರನೆಯದಾಗಿ: ಅಪ್ಪಟ ದೇಸಿ ಸಾಹಿತಿ ಎನ್ನಬಹುದಾದ ಚಂದ್ರಶೇಖರ ಕಂಬಾರರಿಗೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಹಿಂದಿಯನ್ನು ಬಿಟ್ಟರೆ, ಮತ್ತಾವ ಭಾರತೀಯ ಭಾಷೆಯೂ ಎಂಟು ‘ಜ್ಞಾನಪೀಠ’ಗಳನ್ನು ಪಡೆದಿಲ್ಲವೆಂದರೆ, ಇದರ ಮಹತ್ವ ವಿದಿತವಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಘನತೆಗೆ ಇದು ಸುಸಾಕ್ಷಿ. ಅಂತೆಯೆ, ಎಸ್.ಎಲ್. ಭೈರಪ್ಪನವರು ‘ಸರಸ್ವತಿ ಸಮ್ಮಾನ್’ಗೆ ಪಾತ್ರರಾಗಿರುವುದು ಕನ್ನಡಕ್ಕೆ ಮತ್ತೊಂದು ಕೋಡು ಮೂಡಿಸಿದೆ. ಈ ಇಬ್ಬರು ಸಾಹಿತಿಗಳೂ ಅಭಿನಂದನೀಯರು.
ಕೇಂದ್ರ ಸರ್ಕಾರ ಹಣ ಕೊಟ್ಟಿದೆ ಎನ್ನುವಾಗ, ರಾಜ್ಯ ಸರ್ಕಾರವೂ ಕೆಲವು ಕೆಲಸಗಳಿಗೆ ಧಾರಾಳವಾಗಿ ಹಣ ಕೊಡುತ್ತದೆ ಎಂಬುದನ್ನು ನೆನೆಯಬೇಕು. 
ಸಂಸ್ಕೃತದಲ್ಲಿ ಒಂದು ಸೂಕ್ತಿಯಿದೆ: 'ಸ ದೇವಂ ವಿಕ್ರೀಯ ತದ್ಯಾತ್ರೋತ್ಸವಂ ಅಕಾರ್ಷೀತ್' (ಅವನು ದೇವರನ್ನೆ-ಅರ್ಥಾತ್ ವಿಗ್ರಹವನ್ನೆ ಮಾರಿ-ಅದರ ಯಾತ್ರೋತ್ಸವವನ್ನು ನಡೆಸಿಬಿಟ್ಟನು.) ನಮ್ಮದು ಎಷ್ಟೋ ಸಲ ದೇವರಿಲ್ಲದ ವೈಭವೋಪೇತ ಉತ್ಸವ. ಹಾಗಾಗಬಾರದು. ಕನ್ನಡ ನಮ್ಮ ದೈವ; ಎಲ್ಲಿಯೂ ಕೇಂದ್ರವಾಗಬೇಕು; ಸ್ಥಾಯಿಯಾಗಬೇಕು.
ಕಡೆಯದಾಗಿ, ಒಂದು ಶತಮಾನದ ಹಿಂದೆ (೧೯೧೧) ಆಚಾರ‍್ಯ ‘ಶ್ರೀ’ಯವರು ಮಂತ್ರವತ್ತಾಗಿ ಹೇಳಿದ ಮಾತನ್ನು ಸ್ಮರಿಸಬೇಕು: 'ಕನ್ನಡ ನಾಡಿಗೆ ಕನ್ನಡವೇ ಗತಿ. ಅನ್ಯಥಾ ಶರಣಂ ನಾಸ್ತಿ. ಸಂಸ್ಕೃತವಲ್ಲ, ಇಂಗ್ಲಿಷಲ್ಲ, ಹಿಂದಿಯಲ್ಲ, ಕನ್ನಡ'. ಈ ಉಕ್ತಿಯೂ ‘ಶ್ರೀ’ಯವರದೇ: 'ಸಂಸ್ಕೃತವನ್ನು ಜೀರ್ಣಿಸಿಕೊಂಡು, ಇಂಗ್ಲಿಷನ್ನು ಜೀರ್ಣಿಸಿಕೊಂಡು ಉಳಿದಂತೆ ಉಳಿದು ಕನ್ನಡವನ್ನು ಉಳಿಸಿ, ಬೆಳೆಸಿ! ಸಂಸ್ಕೃತದಲ್ಲಿಯೂ ಇಂಗ್ಲಿಷಿನಲ್ಲಿಯೂ ಸಿಕ್ಕಿದ್ದು ಹಿಂದಿಯಲ್ಲೇನಾದರೂ ಸಿಕ್ಕಿದರೆ ಅದನ್ನೂ ಕೊಳ್ಳಿ'.
ಎ.ಆರ್. ಕೃಷ್ಣಶಾಸ್ತ್ರಿಯವರು ವ್ಯಥೆಯಿಂದಾಡಿದ ನುಡಿಗಳನ್ನೂ ನೆನೆಯಬಹುದು: 'ಏನಾದರೂ ಒಂದು ದುರದೃಷ್ಟದಿಂದ... ನಮ್ಮ ದೇಶದಲ್ಲಿ ಬೌದ್ಧಧರ್ಮ ಖಿಲವಾಗಿ ನಷ್ಟವಾಗಿ ಹೋದಂತೆ ಸಂಸ್ಕೃತವೂ ಆಗಿಹೋಗುವುದಾದರೆ, ಅದು ಹೊರದೇಶಗಳಲ್ಲಿ ಬದುಕಿರುತ್ತದೆ .. ಆದರೆ ಕನ್ನಡ? ಕನ್ನಡಿಗರೇ, ನಿಮ್ಮ ಕನ್ನಡವನ್ನು ಇಂಡಿಯ ದೇಶದ ಒಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲಿಯೂ ನೋಡಲಾರಿರಿ. ನೀವು ಅದನ್ನು ಅಲಕ್ಷ್ಯ ಮಾಡಿದರೆ ಮಿಕ್ಕ ಯಾವ ದೇಶದ ಜನರೂ ಅದನ್ನು ಎತ್ತಿ ಹಿಡಿಯಲಾರರು. ಅದು ಹೋದರೆ ಹೋಗಲಿ ಎನ್ನುವ ಹಾಗಿದ್ದರೆ, ಈ ಕಡೆ ಬಂಗಾಳಕೊಲ್ಲಿಯಿದೆ, ಆ ಕಡೆ ಅರಬ್ಬಿ ಸಮುದ್ರ ಇದೆ; ಗುಡಿಸಿ ಹಾಕಿಬಿಡಿ. ಇತರ ಭಾಷೆಗಳು ಒತ್ತಿಕೊಂಡು ಬರಲಿ, ಆಕ್ರಮಿಸಿಕೊಳ್ಳಲಿ!' ಈ ‘ಉಪದೇಶ’ವನ್ನು ಅಕ್ಷರಶಃ ತೆಗೆದುಕೊಂಡು ಪಾಲಿಸುವ ದಡ್ಡರಾಗಬಾರದು, ನಾವು! ಕಯ್ಯಾರ ಕಿಞ್ಞಣ್ಣ ರೈಯವರು ಬಹಳ ಹಿಂದೆಯೆ 'ಬೆಂಕಿ ಬಿದ್ದಿದೆ ಮನೆಗೆ!' ಎಂದು ಕೂಗಿಕೊಂಡರು. ಅದು ಇಂದಿಗೂ ಅಪ್ರಸ್ತುತವಲ್ಲ!
ಇದುವರೆಗೆ ನಾನು ಕೆಲವು ಸಮಸ್ಯೆಗಳನ್ನು ಸೂಚಿಸಿದ್ದೇನಷ್ಟೆ; ಪರಿಹಾರೋಪಾಯಗಳನ್ನು ಹೇಳಿಲ್ಲ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸರ್ವಜ್ಞನೂ ಅಲ್ಲ, ಧನ್ವಂತರಿಯೂ ಅಲ್ಲ. ಭಾಷೆ, ಸಾಹಿತ್ಯಗಳಿಗೆ ನೇರವಾಗಿ ಸಂಬಂಧಿಸಿದ ಕೆಲವಂಶಗಳನ್ನೂ ಪ್ರಸ್ತಾಪಿಸಿದ್ದೇನೆ, ಬದುಕಿನ ದೃಷ್ಟಿಯಿಂದ. ಚರ್ಚೆ ನಡೆಯಲಿ.
ಕನ್ನಡಿಗರು ಏಳಿಗೆ ಹೊಂದಬೇಕು ಮಾತ್ರವಲ್ಲ, ದ.ರಾ. ಬೇಂದ್ರೆಯವರ ಪ್ರವಾದಿ ವಾಣಿ ದಿಟವಾಗಲೆಂದೂ ಹಾರೈಸಬೇಕು: 'ಜಗದೇಳಿಗೆಯಾಗುವುದಿದೆ, ಕರ್ನಾಟಕದಿಂದೆ!'
          ಈ ಕನ್ನಡ ಜಾಗೃತಿ ಜಾತ್ರೆಗೆ ಜಯವಿರಲಿ.          ಎಲ್ಲರಿಗೂ ನಮಸ್ಕಾರ.          ಜಯ ಹೇ ಕರ್ಣಾಟಕ ಮಾತೆ!

Advertisement

0 comments:

Post a Comment

 
Top